ಬೆಂಗಳೂರು: ವಿದ್ಯಾರ್ಥಿನಿಗೆ ಪ್ರೀತಿಸುವಂತೆ ಕಿರುಕುಳ ನೀಡಿದ ಯುವಕನನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಟನ್ ಪೇಟೆ ನಿವಾಸಿಯಾದ ಅರುಣ್ ಕುಮಾರ್ ಬಂಧಿತ ಆರೋಪಿ ಎನ್ನಲಾಗಿದೆ. ನಾಗರಬಾವಿ ನಿವಾಸಿಯಾಗಿರುವ ವಿದ್ಯಾರ್ಥಿನಿ ಲಾಕ್ಡೌನ್ ಸಂದರ್ಭದಲ್ಲಿ ಕಾಟನ್ ಪೇಟೆಯಲ್ಲಿರುವ ಅಜ್ಜಿಯ ಮನೆಯಲ್ಲಿ ಉಳಿದುಕೊಂಡಿದ್ದಳು. ಅಲ್ಲಿಯೇ ವಾಸವಾಗಿದ್ದ ಅರುಣ್ ಕುಮಾರ್ ವಿದ್ಯಾರ್ಥಿನಿಯನ್ನು ಪರಿಚಯಿಸಿಕೊಂಡು ಆಕೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದಾನೆ.
ವಿದ್ಯಾರ್ಥಿನಿ ನಾಗರಬಾವಿಯಲ್ಲಿ ಇರುವ ಪೋಷಕರ ಮನೆಗೆ ಹಿಂತಿರುಗಿದ ನಂತರ ಮೆಸೇಜ್ ಗಳನ್ನು ಕಳುಹಿಸುತ್ತಿದ್ದ ಆತ ಪ್ರೀತಿಸುವಂತೆ ಬಲವಂತ ಮಾಡಿದ್ದಾನೆ. ವಿದ್ಯಾರ್ಥಿನಿ ಪೋಷಕರಿಗೆ ಮಾಹಿತಿ ನೀಡಿದಾಗ ಆತನನ್ನು ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.
ಮತ್ತೆ ತನ್ನ ಚಾಳಿ ಮುಂದುವರೆಸಿದ ಅರುಣ್ ಕುಮಾರ್ ಮದುವೆಯಾಗುವಂತೆ ವಿದ್ಯಾರ್ಥಿನಿಗೆ ಬಲವಂತ ಮಾಡಿದ್ದಾನೆ. ಇಲ್ಲದಿದ್ದರೆ ಸಂಬಂಧಿಯೊಬ್ಬರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಇದರಿಂದ ಆತಂಕಗೊಂಡ ವಿದ್ಯಾರ್ಥಿನಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.