ಬೆಂಗಳೂರು: ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಗೆ ಬಲವಂತ ಮಾಡಿದ್ದ ವ್ಯಕ್ತಿಯೊಬ್ಬ ಅಶ್ಲೀಲ ಫೋಟೋ ತೆಗೆದು ಅವುಗಳನ್ನು ಸ್ನೇಹಿತರು ಮತ್ತು ಪತ್ನಿಯ ತಂದೆಗೆ ಕಳುಹಿಸಿದ್ದಾನೆ. ಇಂತಹ ಕೃತ್ಯವೆಸಗಿದ ಸಾಫ್ಟ್ ವೇರ್ ಉದ್ಯೋಗಿ ವಿರುದ್ಧ ಹೆಚ್ಚಿನ ತನಿಖೆ ಕೈಗೊಳ್ಳಲು ಹೈಕೋರ್ಟ್ ಆದೇಶಿಸಿದೆ.
ಪ್ರಕರಣದ ಬಗ್ಗೆ ಪೊಲೀಸರು ಸಮರ್ಪಕವಾಗಿ ತನಿಖೆ ಕೈಗೊಂಡಿಲ್ಲವೆಂದು ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ಹೆಚ್ಚಿನ ತನಿಖೆ ಕೈಗೊಳ್ಳಲು ಆದೇಶ ನೀಡಿದೆ.
2019 ರಲ್ಲಿ ವಿವೇಕನಗರ ಠಾಣೆ ಪೊಲೀಸರು ನಡೆಸಿದ ತನಿಖೆ ಸಮರ್ಪಕವಾಗಿಲ್ಲ ಎಂದು ಮಹಿಳೆ ಅರ್ಜಿ ಸಲ್ಲಿಸಿದ್ದರು. ಛತ್ತಿಸ್ ಗಢ ಮೂಲದ ಮಹಿಳೆ, ಬೆಂಗಳೂರು ನಿವಾಸಿಯಾಗಿರುವ ಸಾಫ್ಟ್ವೇರ್ ಉದ್ಯೋಗಿ 2013ರಲ್ಲಿ ಮುಂಬೈ ಐಐಟಿಯಲ್ಲಿ ಪಿ.ಹೆಚ್.ಡಿ. ಮಾಡುವಾಗ ಪ್ರೀತಿಸಿ 2015 ರಲ್ಲಿ ಮದುವೆಯಾಗಿದ್ದರು.
2016ರಲ್ಲಿ ಪತ್ನಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬಲವಂತ ಮಾಡುತ್ತಿದ್ದಾರೆ ಎಂದು ಪತ್ನಿ ತವರಿಗೆ ಹೋಗಿದ್ದಳು. ನಂತರ ಪತ್ನಿಯ ಅಶ್ಲೀಲ ಫೋಟೋಗಳನ್ನು ಆಕೆಯ ತಂದೆ ಮತ್ತು ಕೆಲವು ಸ್ನೇಹಿತರಿಗೆ ಪತಿ ಕಳುಹಿಸಿದ್ದ. ಇದರ ಬಗ್ಗೆ ಛತ್ತಿಸ್ ಗಢ ಪೊಲೀಸರಿಗೆ ದೂರು ನೀಡಲಾಗಿತ್ತು. ಪತಿ ಬೆಂಗಳೂರಿನಲ್ಲಿದ್ದ ಕಾರಣ ಪ್ರಕರಣವನ್ನು ವಿವೇಕನಗರ ಪೊಲೀಸರಿಗೆ ವರ್ಗಾಯಿಸಲಾಗಿತ್ತು.