ಶಿವಮೊಗ್ಗ: ಸರ್ಕಾರಿ ಕೆಲಸ ಕೊಡಿಸುವುದಾಗಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 62 ವರ್ಷದ ವ್ಯಕ್ತಿಗೆ ಶಿವಮೊಗ್ಗದ ಎರಡನೇ ಜೆಎಂಎಫ್ಸಿ ನ್ಯಾಯಾಲಯ ಒಂದೂವರೆ ವರ್ಷ ಸಾದಾ ಜೈಲು ಶಿಕ್ಷೆ, 40 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಶಿವಮೊಗ್ಗ ನಗರದ 27 ವರ್ಷದ ಮಹಿಳೆ 2000ರಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಪರಿಚಿತನಾಗಿರುವ ವ್ಯಕ್ತಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಜೊತೆಗೆ ತನ್ನ ಫೋಟೋಗಳನ್ನು ಇಟ್ಟುಕೊಂಡು ಬೆದರಿಸುತ್ತಿದ್ದಾನೆ. ಈ ವಿಚಾರವನ್ನು ಪೊಲೀಸರು ಅಥವಾ ಬೇರೆಯವರಿಗೆ ಹೇಳಿದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ನೊಂದ ಮಹಿಳೆ ದೂರು ನೀಡಿದ್ದರು.
ಕೋಟೆ ಪೊಲೀಸ್ ಠಾಣೆಯ ಅಂದಿನ ಸಿಪಿಐ ಕೆ. ಚಂದ್ರಪ್ಪ ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿ ಆರೋಪ ದೃಢಪಟ್ಟ ಕಾರಣ ನ್ಯಾಯಾಧೀಶರಾದ ಶಾರದಾ ಕೊಪ್ಪದ ಅವರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ದಂಡದ ಮೊತ್ತದಲ್ಲಿ 36,000 ರೂ. ನೊಂದ ಮಹಿಳೆಗೆ ನೀಡಲು ತಿಳಿಸಿದ್ದಾರೆ. ಸರ್ಕಾರದ ಪಕಾರವಾಗಿ ವಕೀಲ ಕಿರಣ್ ಕುಮಾರ್ ವಾದ ಮಂಡಿಸಿದ್ದರು.