ಬೆಂಗಳೂರು: ರಸ್ತೆಯಲ್ಲೇ ಯುವತಿ ಅಡ್ಡಗಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ವಿಶೇಷ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಹಾಗೂ 5000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಎರಡು ತಿಂಗಳೊಳಗೆ ಸಂತ್ರಸ್ಥೆಗೆ 10 ಸಾವಿರ ರೂಪಾಯಿ ಪರಿಹಾರ ನೀಡಲು ಸೂಚಿಸಲಾಗಿದೆ.
2018 ರ ಮಾರ್ಚ್ 24ರಂದು ಯಡಿಯೂರು ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕೆಆರ್ ರಸ್ತೆಯ ಕಾಫಿಶಾಪ್ ಮುಂದೆ ನಡೆದುಕೊಂಡು ಹೋಗುವಾಗ ಏಕಾಏಕಿ ಅಡ್ಡಗಟ್ಟಿದ್ದ ಆರೋಪಿ ಮೈಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದು, ವಿಶೇಷ ನ್ಯಾಯಾಲಯ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ತಪ್ಪೆಸಗಿರುವುದು ದೃಢಪಟ್ಟಿದ್ದರಿಂದ ಶಿಕ್ಷೆ ಪ್ರಕಟಿಸಿದೆ. ಸರ್ಕಾರಿ ಅಭಿಯೋಜಕರಾದ ಕೃಷ್ಣವೇಣಿ ವಾದ ಮಂಡಿಸಿದ್ದರು.