ಬೆಂಗಳೂರು: ಕಚೇರಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಜ್ಯ ಕಾನೂನು ಮತ್ತು ಅಭಿಯೋಜನಾ ಇಲಾಖೆ ಹಿರಿಯ ಕಾನೂನು ಅಧಿಕಾರಿ ಕಚೇರಿ ಆಡಳಿತಾಧಿಕಾರಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಸದ ವೇಳೆಯಲ್ಲಿ ಆರು ತಿಂಗಳಿನಿಂದ ಕಚೇರಿಯಲ್ಲಿ ಅಧಿಕಾರಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ದೂರು ನೀಡಿದ್ದಾರೆ. ಅದರ ಅನ್ವಯ ಎಫ್ಐಆರ್ ದಾಖಲಿಸಲಾಗಿದೆ.
ಸಂತ್ರಸ್ತೆಗೆ ಬೇರೆ ಜಿಲ್ಲೆಯಿಂದ ಅಭಿಯೋಜನಾ ಇಲಾಖೆಗೆ ಕಳೆದ ವರ್ಷ ವರ್ಗಾವಣೆಯಾಗಿದೆ. 2023ರ ಜನವರಿ 4 ರಿಂದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಧಿಕಾರಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸುತ್ತಿದ್ದರು. ಇದಕ್ಕೆ ಒಪ್ಪಿರಲಿಲ್ಲ. ಕಚೇರಿ ಸಹಾಯಕ ಅಧಿಕಾರಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಪೀಡಿಸಿದ್ದ. ಅವರ ಒತ್ತಡಕ್ಕೆ ಮಣಿಯದಿದ್ದಾಗ ಬೇರೆಡೆ ವರ್ಗಾವಣೆ ಮಾಡಲಾಗಿದೆ. ಇಲಾಖೆಯಲ್ಲಿ ಹೇಗೆ ಕೆಲಸ ಮಾಡುತ್ತೀಯಾ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಲಾಗಿದೆ.
ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.