ಚಿಕ್ಕೋಡಿ: ಚಿಕ್ಕೋಡಿ ಠಾಣೆಯ ಪೊಲೀಸರು ಕಾಮುಕ ಶಿಕ್ಷಕನನ್ನು ಬಂಧಿಸಿದ್ದಾರೆ. ಸರ್ಕಾರಿ ಶಾಲೆಯ ಶಿಕ್ಷಕನಾಗಿರುವ ಆರೋಪಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಶಿಕ್ಷಕ ಸಾದಿಕ್ ಬೇಗ್ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ಆರೋಪಿ ತಾನು ಶಿಕ್ಷಕ ಅನ್ನುವುದನ್ನೇ ಮರೆತು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಾನೆ. ಬಾಲಕಿಯರಿಗೆ ಮುಟ್ಟಬಾರದ ಜಾಗದಲ್ಲಿ ಮುಟ್ಟಿ ವಿಕೃತಿ ಮೆರೆದಿದ್ದಾನೆ. ಶೌಚಕ್ಕೆ ಹೋಗಿದ್ದಾಗ ಪ್ರೈವೇಟ್ ಪಾರ್ಟ್ ಫೋಟೋ ತೆಗೆದು ಕೊಂಡು ಬರುವಂತೆ ಒತ್ತಾಯಿಸುತ್ತಿದ್ದ. ಫೋಟೋಗಳನ್ನು ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡು ವಿಕೃತಿ ಮೆರೆಯುತ್ತಿದ್ದ. ಈ ಬಗ್ಗೆ ಮಕ್ಕಳ ಹೇಳಿಕೆ ಕೇಳಿ ಪೋಷಕರು ಮತ್ತು ಪೊಲೀಸರು ಶಾಕ್ ಆಗಿದ್ದಾರೆ. ಪಾಠ ಮಾಡುವುದನ್ನೇ ಬಿಟ್ಟು ಶಿಕ್ಷಕ ಕಾಮುಕನಾಗಿ ವಿಕೃತಿ ಮೆರೆದಿದ್ದಾನೆ. ಓರ್ವ ಬಾಲಕಿ ತಾಯಿಯ ಗಮನಕ್ಕೆ ತಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು 30ಕ್ಕೂ ಹೆಚ್ಚು ಬಾಲಕಿಯರ ಮೇಲೆ ಕಳೆದ ಒಂದು ವರ್ಷದಿಂದ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ.
ಶುಕ್ರವಾರ ಸಂಜೆ ಅಳುತ್ತಾ ಮನೆಗೆ ಬಂದಿದ್ದ ಬಾಲಕಿಯನ್ನು ಪೋಷಕರು ಪ್ರಶ್ನಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಬಾಲಕಿಯ ತಂದೆ ಇತರೆ ಪೋಷಕರಿಗೆ ಮಾಹಿತಿ ನೀಡಿ ವಿಚಾರಿಸಿದಾಗ ಅನೇಕ ವಿದ್ಯಾರ್ಥಿನಿಯರಿಗೆ ಶಿಕ್ಷಕ ಲೈಂಗಿಕ ಕಿರುಕುಳ ನೀಡುವುದು ಬೆಳಕಿಗೆ ಬಂದಿದೆ. ಉಳಿದ ಪೋಷಕರು ಕೂಡ ದೂರು ನೀಡಲು ಮುಂದಾಗಿದ್ದಾರೆ. ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.