
ಗದಗ: ಸರ್ಕಾರದ ಅಧೀನದ ಮಕ್ಕಳ ಪಾಲನಾ ಕೇಂದ್ರದಲ್ಲಿ ಐದು ವರ್ಷದಿಂದ ಆಶ್ರಯ ಪಡೆದಿದ್ದ ಬಾಲಕಿ ಗರ್ಭಿಣಿಯಾಗಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
5 ವರ್ಷದ ಹಿಂದೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಬಾಲಕಿ ಮಕ್ಕಳ ಪಾಲನಾ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾಳೆ. ಕೆಲವು ತಿಂಗಳ ಹಿಂದೆ ಪ್ರಕರಣದ ಆರೋಪಿಗೆ ಶಿಕ್ಷೆಯಾಗಿದೆ. 2023ರ ಜುಲೈ 1 ಮತ್ತು ಆಗಸ್ಟ್ 17ರಂದು ಬೆಟಗೇರಿಯಲ್ಲಿರುವ ತನ್ನ ತಂದೆಯನ್ನು ಭೇಟಿ ಮಾಡಲು ಬಾಲಕಿ ಹೋಗಿದ್ದಾಗ ಆಕೆಯ 35 ವರ್ಷದ ಸಂಬಂಧಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಮೂರು ತಿಂಗಳಿಂದ ಮಾಸಿಕ ಋತು ಚಕ್ರ ಆಗದ ಬಗ್ಗೆ ಪಾಲನಾ ಕೇಂದ್ರದಲ್ಲಿದ್ದ ಗೆಳತಿಯರಿಗೆ ಬಾಲಕಿ ತಿಳಿಸಿದ್ದಾಳೆ. ಕೇಂದ್ರದ ಅಧಿಕಾರಿಗಳಿಗೆ ವಿಷಯ ತಿಳಿದು ವೈದ್ಯರ ಬಳಿ ತಪಾಸಣೆ ನಡೆಸಿದಾಗ ಗರ್ಭಿಣಿ ಆಗಿರುವುದು ಗೊತ್ತಾಗಿದೆ. ಪೊಲೀಸರಿಗೆ ದೂರು ನೀಡಲಾಗಿದೆ. ನಂತರ ಬಾಲಕಿ ಸಂಬಂಧಿಯಿಂದ ದೌರ್ಜನ್ಯಕ್ಕೊಳಗಾದ ಬಗ್ಗೆ ವಿಷಯ ತಿಳಿಸಿ ದೂರು ನೀಡಿದ್ದು, ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.