ಮಂಗಳೂರು: ಇಂಟರ್ನ್ ಶಿಪ್ ಗೆ ಹೋಗುತ್ತಿದ್ದ ಯುವತಿಯ ಮೇಲೆ ಖ್ಯಾತ ವಕೀಲ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ.
ಮಂಗಳೂರಿನ ಪ್ರತಿಷ್ಠಿತ ವಕೀಲರ ಕಚೇರಿಯಲ್ಲಿ ಘಟನೆ ನಡೆದಿದೆ. ಯುವತಿ ಮತ್ತು ವಕೀಲನ ನಡುವೆ ನಡೆದ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ಕೆಲಸ ಚೆನ್ನಾಗಿ ಮಾಡುತ್ತಿಯಾ ಎಂದು ಮೈಕೈ ಮುಟ್ಟಿ ಹತ್ತಿರಕ್ಕೆ ಎಳೆದುಕೊಂಡು ವಕೀಲ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ವಕೀಲರ ಕಚೇರಿಯಲ್ಲಿ ಐದರಿಂದ ಆರು ಮಂದಿ ಕೆಲಸ ಮಾಡುತ್ತಿದ್ದು, ಸಂಜೆ 5 ಗಂಟೆಯ ನಂತರ ಜೂನಿಯರ್ಸ್ ಮನೆಗೆ ತೆರಳುತ್ತಿದ್ದರು. ಸಂತ್ರಸ್ತೆಗೆ ಆರು ಗಂಟೆಯ ನಂತರವೂ ಕೆಲಸ ಕೊಡುತ್ತಿದ್ದರು. 7 ಗಂಟೆಯ ಸುಮಾರಿಗೆ ಯುವತಿಯನ್ನು ಚೇಂಬರ್ ಗೆ ಕರೆಯಿಸಿಕೊಂಡು ಕಿರುಕುಳ ನೀಡಿದ್ದಾರೆ.
ಉತ್ತರ ಭಾರತ ಮೂಲದ ಸಂತ್ರಸ್ತೆ ಇಂಟರ್ನ್ ಶಿಪ್ ಮಾಡುತ್ತಿದ್ದರು. ವಕೀಲ ಮತ್ತು ಸಂತ್ರಸ್ತೆ ಮಾತನಾಡಿದ್ದಾರೆ ಎನ್ನಲಾದ 11 ನಿಮಿಷ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ ಸಂತ್ರಸ್ತೆಯ ಬಳಿ ವಕೀಲ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಈ ವಿಚಾರವನ್ನು ಯಾರಿಗೂ ಹೇಳಬೇಡ. ನನ್ನಿಂದ ತಪ್ಪಾಗಿದೆ ಕ್ಷಮಿಸು ಎಂದು ಸಂತ್ರಸ್ತೆಯ ಬಳಿ ಮನವಿ ಮಾಡಿಕೊಂಡಿದ್ದಾರೆ.
ವಕೀಲ ಮತ್ತು ಸಂತ್ರಸ್ತೆ ಆಡಿಯೋ ವೈರಲ್ ಆದ ನಂತರ ಮಂಗಳೂರು ಎಬಿವಿಪಿ ವತಿಯಿಂದ ತನಿಖೆಗೆ ಒತ್ತಾಯ ಮಾಡಲಾಗಿದ್ದು, ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಬಳಿಕ ಸಂತ್ರಸ್ತೆಯೂ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿ, ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪ ಮಾಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.