ಸಾಲ ವಸೂಲಾತಿ ಏಜೆಂಟರ ಕಿರುಕುಳ ತಡೆಯಲಾರದೆ ದಂಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನಲ್ಲಿ ನಡೆದಿದೆ.
ರಾಜಮಹೇಂದ್ರವರಂ ಆನಂದನಗರದಲ್ಲಿ ವಾಸವಾಗಿರುವ ಕೊಲ್ಲಿ ದುರ್ಗಾರಾವ್(32) ಮತ್ತು ಲಕ್ಷ್ಮಿ (28) ಆತ್ಮಹತ್ಯೆ ಮಾಡಿಕೊಂಡವರು. ಇತ್ತೀಚೆಗೆ ತಮ್ಮ ಅಗತ್ಯಗಳಿಗಾಗಿ ಆನ್ ಲೈನ್ ಆ್ಯಪ್ ಮೂಲಕ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಸಕಾಲದಲ್ಲಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ ಆ್ಯಪ್ ನಿರ್ವಾಹಕರು ಬೆದರಿಕೆ ಹಾಕಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.
ವಿವಿಧ ರೀತಿಯಲ್ಲಿ ಕಿರುಕುಳ ನೀಡಿದ ನಂತರ ದಂಪತಿಗಳು ತೀವ್ರ ಅಸಮಾಧಾನಗೊಂಡಿದ್ದರು. ದಂಪತಿಗಳು ಸಾಲವನ್ನು ಮರುಪಾವತಿ ಮಾಡದಿದ್ದರೆ, ಅವರ ಮಾರ್ಫ್ ಮಾಡಿದ ಮತ್ತು ನಗ್ನ ಫೋಟೋಗಳನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಲಾಗುತ್ತದೆ ಎಂದು ಸಾಲ ವಸೂಲಾತಿ ಏಜೆಂಟ್ ಗಳು ಹೇಳಿದ್ದರು.
ರಾಜಮಹೇಂದ್ರವರಂನ ಸಾಯಿಕೃಷ್ಣ ಲಾಡ್ಜ್ ನಲ್ಲಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಅವರು ಇಂತಹ ನಿರ್ಧಾರ ಕೈಗೊಂಡಿರುವ ಬಗ್ಗೆ ಪತಿಯ ಸಹೋದರನಿಗೆ ತಿಳಿಸಿದ್ದರು.
ವಿಷಯ ತಿಳಿದ ಸಹೋದರ ಕೂಡಲೇ ಸಾಯಿಕೃಷ್ಣ ಲಾಡ್ಜ್ ಗೆ ಆಗಮಿಸಿ ದಂಪತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದುರ್ಗಾರಾವ್ ಮತ್ತು ಅವರ ಪತ್ನಿ ಲಕ್ಷ್ಮಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ರಾಜಮಹೇಂದ್ರವರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.