ಜನ್ಮದಿನದ ಸಂಭ್ರಮದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪತ್ನಿ ಹಾಗೂ ಬಾಲಿವುಡ್ ನಟಿ ಇನ್ಸ್ಟಾಗ್ರಾಂನಲ್ಲಿ ವಿಶೇಷವಾಗಿ ಶುಭ ಕೋರಿದ್ದಾರೆ.
ಪತಿಯ ಜೊತೆಗಿನ ಮುದ್ದಾದ ಫೋಟೋವನ್ನು ಹಂಚಿಕೊಂಡಿರುವ ನಟಿ ಅನುಷ್ಕಾ ಶರ್ಮಾ ಕ್ಯಾಪ್ಶನ್ನಲ್ಲಿ ಕೊಹ್ಲಿಯ ಬಗ್ಗೆ ಹೃದಯಸ್ಪರ್ಶಿ ಮಾತುಗಳನ್ನು ಬರವಣಿಗೆಗೆ ಇಳಿಸಿದ್ದಾರೆ.
ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ನಟಿ ಅನುಷ್ಕಾ ಶರ್ಮಾ ಜೀವನವನ್ನು ಅತ್ಯಂತ ಸುಂದರ ಎನ್ನುವಂತೆ ಮಾಡಿದ್ದಕ್ಕೆ ಪತಿಗೆ ಧನ್ಯವಾದ ಅರ್ಪಿಸಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಜೀವನವನ್ನು ಹೇಗೆ ಮುನ್ನಡೆಸುತ್ತಾರೆ ಹೇಗೆ ಅವರು ಎಲ್ಲವನ್ನು ಧೈರ್ಯದಿಂದ ಎದುರಿಸುತ್ತಾರೆ ಎಂಬುದನ್ನೂ ಅನುಷ್ಕಾ ಹೊಗಳಿದ್ದಾರೆ.
ಈ ಫೋಟೋ ಹಾಗೂ ನೀವು ನಿಮ್ಮ ಜೀವನ ಹೇಗೆ ನಡೆಸುತ್ತೀರಿ ಎಂಬುದಕ್ಕೆ ಯಾವುದೇ ಫಿಲ್ಟರ್ಗಳ ಅಗತ್ಯವಿಲ್ಲ. ನೀವು ಪ್ರಾಮಾಣಿಕತೆ ಹಾಗೂ ಉಕ್ಕಿನಂತಹ ಧೈರ್ಯದಿಂದ ಮಾಡಲ್ಪಟ್ಟಿದ್ದೀರಿ. ನಿಮ್ಮಂತೆ ಕತ್ತಲೆಯಿಂದ ಪುಟಿದೇಳುವ ಧೈರ್ಯ ಎಲ್ಲರಿಗೂ ಇರೋದಿಲ್ಲ. ನಾವಿಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಬಗ್ಗೆ ಮಾತನಾಡುತ್ತಾ ಕೂರುವವರಲ್ಲ. ಆದರೆ ಒಮ್ಮೊಮ್ಮೆ ನನಗೆ ನೀವೆಷ್ಟು ಅದ್ಭುತ ವ್ಯಕ್ತಿ ಹಾಗೂ ನಿಮ್ಮನ್ನ ಸರಿಯಾಗಿ ಅರಿತವರು ಮಾತ್ರ ಅದೃಷ್ಟಶಾಲಿಗಳು ಎಂದು ಜಗತ್ತಿಗೆ ಕೂಗಿ ಹೇಳಬೇಕು ಎನಿಸುತ್ತೆ. ನನ್ನ ಜೀವನವನ್ನು ಇನ್ನಷ್ಟು ಸುಂದರವಾಗಿಸಿದ್ದಕ್ಕೆ ಧನ್ಯವಾದಗಳು ಎಂದು ಅನುಷ್ಕಾ ಶೀರ್ಷಿಕೆ ನೀಡಿದ್ದಾರೆ.
ಕೆಲ ವರ್ಷಗಳ ಕಾಲ ಡೇಟಿಂಗ್ನಲ್ಲಿದ್ದ ಈ ಜೋಡಿ 2017ರ ಡಿಸೆಂಬರ್ 11ರಂದು ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಈ ವರ್ಷದ ಜನವರಿ 11ರಂದು ವಿರುಷ್ಕಾ ದಂಪತಿ ವಮಿಕಾಗೆ ಜನ್ಮ ನೀಡಿದ್ದಾರೆ.