ಬೆಂಗಳೂರು: ‘ಬಿಗ್ ಬಾಸ್’ ಕನ್ನಡ ಸೀಸನ್ 11ರ ಗ್ರಾಂಡ್ ಫಿನಾಲೆಯಲ್ಲಿ ಗಾಯಕ ಕುರಿಗಾಹಿ ಹನುಮಂತು ಜಯಗಳಿಸಿದ್ದಾರೆ. ಈ ಮೂಲಕ ‘ಬಿಗ್ ಬಾಸ್’ ಟ್ರೋಫಿ ಯಾರ ಕೈಸೇರಲಿದೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ.
ಭಾನುವಾರ ನಡೆದ ಗ್ರಾಂಡ್ ಫಿನಾಲೆಯಲ್ಲಿ ನಟ ಕಿಚ್ಚ ಸುದೀಪ್ ಅವರು ವಿಜೇತರನ್ನು ಘೋಷಣೆ ಮಾಡಿದ್ದಾರೆ. ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದು, ದ್ವಿತೀಯ ರನ್ನರ್ ಅಪ್ ಆಗಿ ರಜತ್ ಕಿಶನ್ ಆಯ್ಕೆಯಾಗಿದ್ದಾರೆ. ತೃತೀಯ ರನ್ನರ್ ಅಪ್ ಆಗಿ ಮೋಕ್ಷಿತಾ ಪೈ ಆಯ್ಕೆಯಾಗಿದ್ದಾರೆ.
120 ದಿನಗಳ ಕಾಲ ನಡೆದ ಶೋನಲ್ಲಿ ಮುಗ್ಧತೆ ಮತ್ತು ಸರಳ ವ್ಯಕ್ತಿತ್ವದ ಮೂಲಕ ಜನರ ಮನಸ್ಸನ್ನು ಗೆದ್ದಿದ್ದ ಹನುಮಂತು ಅವರಿಗೆ ವೀಕ್ಷಕರಿಂದ ವೋಟಿನ ಸುರಿಮಳೆಯಾಗಿತ್ತು. ನಟ ಸುದೀಪ್ ನಡೆಸಿಕೊಟ್ಟ ಅಂತಿಮ ಶೋ ಇದಾಗಿದೆ. ಸಿನಿಮಾ, ಧಾರವಾಹಿ ಸೇರಿದಂತೆ ವಿವಿಧ ಕ್ಷೇತ್ರಗಳಿಂದ 11 ಸ್ಪರ್ಧಿಗಳು ಭಾಗವಹಿಸಿದ್ದರು. ಬಿಗ್ ಬಾಸ್ ವಿಜೇತ ಹನುಮಂತು ಅವರಿಗೆ ಟ್ರೋಫಿ ಜೊತೆಗೆ 50 ಲಕ್ಷ ರೂ. ನಗದು ಬಹುಮಾನ ಹಾಗೂ ಕಾರ್ ಉಡುಗೊರೆಯಾಗಿ ನೀಡಲಾಗುವುದು ಎನ್ನಲಾಗಿದೆ.