‘ರಾಮಲೀಲಾ’ ನಾಟಕದ ವೇಳೆ ಹನುಮಾನ್ ಪಾತ್ರ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ವೇದಿಕೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಹರಿಯಾಣದ ಭಿವಾನಿಯಲ್ಲಿ ನಡೆದಿದೆ.
ಹರೀಶ್ ಮೆಹ್ತಾ ಎಂಬುವವರು ನಾಟಕ ಪ್ರದರ್ಶನದ ಸಮಯದಲ್ಲಿ ಹೃದಯಾಘಾತಕ್ಕೆ ಒಳಗಾದರು ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರದ ಭವ್ಯ ಉದ್ಘಾಟನೆಯನ್ನು ಆಚರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ರೆಕಾರ್ಡ್ ಮಾಡಿದ ವೀಡಿಯೊದಲ್ಲಿ, ಮೆಹ್ತಾ ಅವರು ಭಿವಾನಿಯ ಜವಾಹರ್ ಚೌಕ್ ಪ್ರದೇಶದಲ್ಲಿ ನಡೆದ ಸ್ಥಳೀಯ ಕಾರ್ಯಕ್ರಮದಲ್ಲಿ ಹನುಮಾನ್ ವೇಷ ಧರಿಸಿ ನೃತ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನೆಲದ ಮೇಲೆ ಬಿದ್ದಿದ್ದಾರೆ. ಮೊದಲು ಇದು ನಾಟಕದ ಒಂದು ಭಾಗ ಎಂದು ಯಾರೂ ಅವರ ರಕ್ಷಣೆಗೆ ಬರಲಿಲ್ಲ. ಒಂದು ನಿಮಿಷದ ನಂತರ ಮೆಹ್ತಾ ಮಿಸುಕಾಡದೇ ಇದ್ದಾಗ ಜನರು ವೇದಿಕೆಯತ್ತ ಓಡೋಡಿ ಬಂದಿದ್ದಾರೆ. ನಂತರ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಹರೀಶ್ ಮೆಹ್ತಾ ಅವರು ವಿದ್ಯುತ್ ಇಲಾಖೆಯಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಯಿಂದ ನಿವೃತ್ತರಾಗಿದ್ದರು ಮತ್ತು ಕಳೆದ 25 ವರ್ಷಗಳಿಂದ ಹನುಮಾನ್ ಪಾತ್ರವನ್ನು ನಿರ್ವಹಿಸುತ್ತಿದ್ದರು.