ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದ ಹೊರಗೆ ಮಂಗಳವಾರ ಬಲಪಂಥೀಯ ಗುಂಪಿನ ಸದಸ್ಯರು ಹನುಮಾನ್ ಚಾಲೀಸಾ ಪಠಿಸಿದ್ದಾರೆ. ಇಲ್ಲಿನ ಸಾಂಪ್ರದಾಯಿಕ ಸ್ಮಾರಕವನ್ನು ‘ವಿಷ್ಣು ಸ್ತಂಭ’ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಕನಿಷ್ಠ 30 ಪ್ರತಿಭಟನಾಕಾರರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಅಲ್ಲಿಂದ ಅವರನ್ನು ನಂತರ ಬಿಡುಗಡೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಸ್ತೆಯ ಮಧ್ಯದಲ್ಲಿ ಪ್ರತಿಭಟಿಸಿ ಟ್ರಾಫಿಕ್ ದಟ್ಟಣೆಯನ್ನು ಉಂಟುಮಾಡುವ ಮತ್ತು ಪ್ರಯಾಣಿಕರಿಗೆ ಅನಾನುಕೂಲತೆ ತಂದ ಕಾರಣಕ್ಕೆ ಅವರನ್ನು ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ಹೇಳಿದರು. ಯುನೈಟೆಡ್ ಹಿಂದೂ ಫ್ರಂಟ್ನ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಭಗವಾನ್ ಗೋಯಲ್, ಕುತುಬ್ ಮಿನಾರ್ ಅನ್ನು ‘ವಿಷ್ಣು ಸ್ತಂಭ’ ಎಂದು ಹೇಳಿದ್ದು, ಇದನ್ನು ಮಹಾರಾಜ ವಿಕ್ರಮಾದಿತ್ಯ ನಿರ್ಮಿಸಿದ. ನಂತರ ಕುತುಬುದ್ದೀನ್ ಐಬಕ್ ಅದರ ಕ್ರೆಡಿಟ್ ಪಡೆದುಕೊಂಡ ಎಂದರು.
ಈ ಸಂಕೀರ್ಣದಲ್ಲಿ 27 ದೇವಾಲಯಗಳಿದ್ದವು. ಅವುಗಳನ್ನು ಐಬಕ್ ನಾಶಪಡಿಸಿದ. ಕುತುಬ್ ಮಿನಾರ್ ಸಂಕೀರ್ಣದಲ್ಲಿ ಇರಿಸಲಾಗಿರುವ ಹಿಂದೂ ದೇವರುಗಳ ವಿಗ್ರಹಗಳನ್ನು ಜನರು ಕಾಣಬಹುದಾದ್ದರಿಂದ ಇದಕ್ಕೆಲ್ಲ ಪುರಾವೆಗಳು ಲಭ್ಯವಿವೆ. ಕುತುಬ್ ಮಿನಾರ್ ಅನ್ನು ವಿಷ್ಣು ಸ್ತಂಭ ಎಂದು ಕರೆಯಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದರು.
ಪ್ರತಿಭಟನಾಕಾರರು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿ ಹನುಮಾನ್ ಚಾಲೀಸಾ ಪಠಿಸಿದರು. “ಕುತುಬ್ ಮಿನಾರ್ ಅನ್ನು ವಿಷ್ಣು ಸ್ತಂಭ ಎಂದು ಕರೆಯಬೇಕು” ಎಂಬ ಫಲಕಗಳನ್ನು ಪ್ರದರ್ಶಿಸಿದರು. .
ಸಂಕೀರ್ಣದ ವಿವಿಧ ಸ್ಥಳಗಳಲ್ಲಿ ವಿಗ್ರಹಗಳನ್ನು ಇರಿಸಲಾಗಿದೆ ಎಂದು ಗೋಯಲ್ ಪ್ರತಿಪಾದಿಸಿದ್ದು, ಅವುಗಳನ್ನು ಒಂದೇ ಸ್ಥಳದಲ್ಲಿ ಇಡಬೇಕು. ಅಲ್ಲಿ ಪೂಜೆ ಮಾಡುವ ಹಕ್ಕನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಅವರಿಗೆ ನಮ್ಮ ಬೇಡಿಕೆಗಳ ಮನವಿ ಪತ್ರ ನೀಡಿದ್ದೇವೆ ಅವರು ಹೇಳಿದರು.
ಕುತಾಬ್ ಮಿನಾರ್ ಸಂಕೀರ್ಣದ ಒಳಗಿರುವ ಕುವ್ವಾತ್-ಉಲ್-ಇಸ್ಲಾಂ ಮಸೀದಿಯಿಂದ ವಿಗ್ರಹಗಳನ್ನು ತೆಗೆದುಹಾಕಲು ಬಲಪಂಥೀಯ ಗುಂಪುಗಳ ಬೇಡಿಕೆಯ ನಡುವೆ ಇಂದಿನ ಬೆಳವಣಿಗೆ ನಡೆದಿದೆ.
ಗೋಯಲ್ ಈ ಹಿಂದೆ ಇತರ ಹಿಂದೂ ಗುಂಪುಗಳನ್ನು ಸಂಕೀರ್ಣದಲ್ಲಿ ಹನುಮಾನ್ ಚಾಲೀಸಾ ಪಠಣಕ್ಕೆ ಸೇರಲು ಕರೆದಿದ್ದರು. ಅವರಿಗೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಅನುಮತಿ ನೀಡಬೇಕು ಅಥವಾ ಮಸೀದಿಯಿಂದ ವಿಗ್ರಹಗಳನ್ನು ತೆಗೆದುಹಾಕಬೇಕು ಎಂದು ಹೇಳಿದ್ದರು.
ಮಸೀದಿಯೊಳಗೆ ಗಣೇಶನ ವಿಗ್ರಹಗಳು ಸಮುದಾಯದ ಭಾವನೆಗಳಿಗೆ ಧಕ್ಕೆ ತರುತ್ತಿವೆ ಎಂದು ಬಲಪಂಥೀಯ ಗುಂಪು ಹೇಳಿದೆ. ಬಲಪಂಥೀಯ ಗುಂಪುಗಳು ಇತ್ತೀಚೆಗೆ 27 ಹಿಂದೂ-ಜೈನ ದೇವಾಲಯಗಳನ್ನು ಕೆಡವಿ ಪಡೆದ ವಸ್ತುಗಳಿಂದ ನಿರ್ಮಿಸಲಾಗಿದೆ ಎಂದು ಹೇಳಿಕೊಳ್ಳುತ್ತಿವೆ. ಕಳೆದ ತಿಂಗಳು, ವಿಶ್ವ ಹಿಂದೂ ಪರಿಷತ್ ವಕ್ತಾರ ವಿನೋದ್ ಬನ್ಸಾಲ್ ಅವರು ಕುತುಬ್ ಮಿನಾರ್ ನಿಜವಾಗಿ ‘ವಿಷ್ಣು ಸ್ತಂಭ’ ಎಂದು ಹೇಳಿದ್ದರು.
ಕುತಾಬ್ ಮಿನಾರ್ ವಾಸ್ತವವಾಗಿ ‘ವಿಷ್ಣು ಸ್ತಂಭ’ ಆಗಿತ್ತು. 27 ಹಿಂದೂ-ಜೈನ ದೇವಾಲಯಗಳನ್ನು ಕೆಡವಿ ಪಡೆದ ವಸ್ತುಗಳಿಂದ ಕುತುಬ್ ಮಿನಾರ್ ನಿರ್ಮಿಸಲಾಯಿತು. ಹಿಂದೂ ಸಮುದಾಯವನ್ನು ಗೇಲಿ ಮಾಡಲು ಈ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ವಿನೋದ್ ಬನ್ಸಾಲ್ ಹೇಳಿದ್ದಾರೆ.
ದೆಹಲಿಯ ಮೊದಲ ಮುಸ್ಲಿಂ ಆಡಳಿತಗಾರ ಕುತಾಬ್-ಉದ್-ದಿನ್ ಐಬಕ್ 13 ನೇ ಶತಮಾನದಲ್ಲಿ ಕುತಾಬ್ ಮಿನಾರ್ ನಿರ್ಮಾಣವನ್ನು ಪ್ರಾರಂಭಿಸಿದ. ಆದರೆ ನೆಲಮಾಳಿಗೆಯನ್ನು ಮಾತ್ರ ಪೂರ್ಣಗೊಳಿಸಲು ಸಾಧ್ಯವಾಯಿತು. ಅವರ ಉತ್ತರಾಧಿಕಾರಿಯಾದ ಇಲ್ತುಮುಶ್ ಇನ್ನೂ ಮೂರು ಮಹಡಿಗಳನ್ನು ಸೇರಿಸಿದ. 1368 ರಲ್ಲಿ ಫಿರೋಜ್ ಷಾ ತುಘಲಕ್ ಐದನೇ ಮತ್ತು ಕೊನೆಯ ಅಂತಸ್ತು ನಿರ್ಮಿಸಿದ.