ಬೆಂಗಳೂರು: ಸಿಟ್ಟಿನಲ್ಲಿ ನೇಣು ಹಾಕ್ಕೋ ಹೋಗು ಎಂದು ಹೇಳಿದರೆ ಅದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಚರ್ಚ್ ಪಾದ್ರಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದೆ. ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು ಮಾಡುವಂತೆ ಕೋರಿ ಉಡುಪಿಯ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದಿಂದ ಈ ಆದೇಶ ನೀಡಲಾಗಿದೆ.
ನ್ಯಾಯಪೀಠವು ದಾಖಲೆಗಳನ್ನು ಪರಿಶೀಲಿಸಿ ನಂತರ ಅರ್ಜಿದಾರರ ಪತ್ನಿಯೊಂದಿಗೆ ಮೃತರು ಸಂಬಂಧ ಹೊಂದಿದ್ದರು. ಈ ವಿಚಾರ ಅವರ ಗಮನಕ್ಕೆ ಬಂದಾರ ಕೋಪದಲ್ಲಿ ಹೋಗಿ ನೇಣು ಹಾಕ್ಕೋ ಎಂದು ಹೇಳಿದ್ದಾರೆ. ಇದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪಾದ್ರಿ 2019ರ ಅ. 11ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. 2022 ರಲ್ಲಿ ಅರ್ಜಿದಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ದೂರಿನಲ್ಲಿ ಆರೋಪಿ ಮತ್ತು ಮೃತ ಪಾದ್ರಿ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ. ಬಳಿಕ ಕೆಲವೇ ಹೊತ್ತಿನಲ್ಲಿ ಪಾದ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ, ಆತ್ಮಹತ್ಯೆಗೆ ಹಲವು ಕಾರಣ ಇರಬಹುದು. ಅದರಲ್ಲಿ ಒಂದು ಚರ್ಚಿನ ಪಾದ್ರಿಯಾಗಿ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ಆಗಿರಬಹುದು. ಮನುಷ್ಯನ ಮನಸ್ಸು ಅತ್ಯಂತ ನಿಗೂಢ ಮತ್ತು ಮನಸ್ಸಿನ ರಹಸ್ಯ ಬಿಚ್ಚಿಡುವುದು ಅಸಾಧ್ಯವೆಂದು ಕೋರ್ಟ್ ಹೇಳಿದೆ.
ಅರ್ಜಿದಾರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರೂ ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡುವುದು ನಿಸ್ಸಂದೇಹವಾಗಿ ಕಾನೂನು ಪ್ರಕ್ರಿಯೆ ವಿರುದ್ಧ ನಡೆದಂತಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು ಪ್ರಕರಣವನ್ನು ರದ್ದು ಮಾಡಿದೆ.