
ಬೆಂಗಳೂರು: ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊತ್ತನೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ತಮಿಳುನಾಡು ಮೂಲದ 48 ವರ್ಷದ ಹೇಮಾವತಿ ಸಾವನ್ನಪ್ಪಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಮೃತ ಹೇಮಾವತಿ ಪಿಜಿ ಆರಂಭಿಸಿದ್ದರು. ನ್ಯೂ ಆಶಾ ಪಿಜಿಯ ನಾಲ್ಕನೇ ಫ್ಲೋರ್ ನ ಕೊಠಡಿಯಲ್ಲಿ ಹೇಮಾವತಿ ಶವವಾಗಿ ಪತ್ತೆಯಾಗಿದ್ದಾರೆ.
ಪತಿಯನ್ನು ತೊರೆದು ಮಗಳ ಜೊತೆಗೆ ಹೇಮಾವತಿ ವಾಸವಾಗಿದ್ದರು. ಈ ನಡುವೆ ಶರವಣ ಎಂಬ ಸ್ನೇಹಿತ ಆಗಾಗ ರೂಮ್ ಗೆ ಬರುತ್ತಿದ್ದ. ಮೊನ್ನೆ ಆತ ಬಂದಾಗ ಇಬ್ಬರ ನಡುವೆ ಜಗಳವಾಗಿದೆ. ಗಂಡನ ಆಸ್ತಿ ಪತ್ರ ನಾಪತ್ತೆ ವಿಚಾರಕ್ಕೆ ಶರವಣ ಜೊತೆಗೆ ಹೇಮಾವತಿ ಜಗಳವಾಡಿರುವ ಶಂಕೆ ವ್ಯಕ್ತವಾಗಿದೆ. ಗಲಾಟೆಯಾದ ಒಂದು ಗಂಟೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಹೇಮಾವತಿ ಶವ ಪತ್ತೆಯಾಗಿದ್ದು, ಪಿಜಿ ಹುಡುಗರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಶರವಣ ಅಲ್ಲಿಯೇ ಮಲಗಿದ್ದ. ಹೇಮಾವತಿ ಪುತ್ರಿ ದೂರಿನ ಮೇರೆಗೆ ಶರವಣ ಮತ್ತು ಆತನ ಸ್ನೇಹಿತ ಸುರೇಶನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೇಮಾವತಿ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.