ಅಯೋಧ್ಯೆ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ) ಪ್ರಕಟಿಸಿದ ವರದಿ ಬಹಿರಂಗವಾದ ನಂತರ ವಿಶ್ವ ಹಿಂದೂ ಪರಿಷತ್(ವಿಹೆಚ್‌ಪಿ) ಜ್ಞಾನವಾಪಿ ಸಂಕೀರ್ಣವನ್ನು ಹಿಂದೂಗಳಿಗೆ ಹಸ್ತಾಂತರಿಸುವಂತೆ ಮುಸ್ಲಿಂ ಗುಂಪಿಗೆ ಮನವಿ ಮಾಡಿದ್ದು, ಇದರ ಬೆನ್ನಲ್ಲೇ ರಾಮ ಜನ್ಮಭೂಮಿ ಮಂದಿರದ ಮುಖ್ಯ ಅರ್ಚಕರು ಇದೇ ರೀತಿಯ ಹೇಳಿಕೆ ನೀಡಿದ್ದಾರೆ.
ಎಎಸ್‌ಐ ವರದಿಯನ್ನು ಉಲ್ಲೇಖಿಸಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್, ಹಿಂದೂ ದೇವಾಲಯವನ್ನು ಕೆಡವಿ ನಿರ್ಮಿಸಿದ ಮಸೀದಿಯಲ್ಲಿ ಮುಸ್ಲಿಮರು ನಮಾಜ್ ಮಾಡಲು ಅನುಮತಿಸುವುದಿಲ್ಲ. ಈ ಜಾಗವನ್ನು ಹಿಂದೂಗಳಿಗೆ ಹಸ್ತಾಂತರಿಸಲು ಮುಸ್ಲಿಮರು ನಿರ್ಧರಿಸಿದರೆ ಸಹೋದರತ್ವ ಉಳಿಯುತ್ತದೆ ಎಂದು ಹೇಳಿದ್ದಾರೆ.
ಶರೀಯತ್ ಪ್ರಕಾರ ಹಿಂದೂ ಕಟ್ಟಡದ ಮೇಲೆ ನಿರ್ಮಿಸಲಾದ ಮಸೀದಿಯಲ್ಲಿ ಮುಸ್ಲಿಮರು ನಮಾಜ್ ಮಾಡಲು ಸಾಧ್ಯವಿಲ್ಲ. ಈ ಮಸೀದಿಯನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಸಾಬೀತಾದ ನಂತರ ಅವರು ಜ್ಞಾನವಾಪಿ ಮಸೀದಿಯನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು. ಈ ಮೂಲಕ ಸಹೋದರತ್ವ ಉಳಿಸಿಕೊಳ್ಳಬೇಕು ಎಂದಿದ್ದಾರೆ.
ಹಿಂದೂಗಳು ಜ್ಞಾನವಾಪಿ ಸಮುಚ್ಚಯದಲ್ಲಿ ಮಂದಿರ ನಿರ್ಮಿಸಿ ಪೂಜೆ ಆರಂಭಿಸಬೇಕು. ಕೆಲವೇ ಜನರಿಂದ ಪ್ರಚೋದನೆಗೆ ಒಳಗಾಗಬೇಡಿ ಎಂದು ನಾನು ಮುಸ್ಲಿಂ ಸಮುದಾಯವನ್ನು ವಿನಂತಿಸುತ್ತೇನೆ. ನಮ್ಮ ಪರಸ್ಪರ ಸಂಬಂಧಗಳು ಸಹೋದರತ್ವ ಮೇಲುಗೈ ಸಾಧಿಸುತ್ತದೆ ಎಂದು ದಾಸ್ ಹೇಳಿದರು.
ಇದಕ್ಕೂ ಮುನ್ನ ವಿಹೆಚ್‌ಪಿ ಅಧ್ಯಕ್ಷ ಅಲೋಕ್ ಕುಮಾರ್ ಶನಿವಾರ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿ ಮಸೀದಿಯ ವಝುಖಾನಾ ಪ್ರದೇಶದಲ್ಲಿ ಕಂಡುಬರುವ ‘ಶಿವಲಿಂಗ’ಕ್ಕೆ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವಾರಣಾಸಿಯ ಜ್ಞಾನವಾಪಿ ಮಸೀದಿಯನ್ನು ಭವ್ಯವಾದ ದೇವಾಲಯವನ್ನು ಕೆಡವಿ ನಿರ್ಮಿಸಲಾಗಿದೆ ಎಂದು ವರದಿಯು ಪುನರುಚ್ಚರಿಸಿರುವುದರಿಂದ, ಈ ರಚನೆಯನ್ನು ಈಗ ಹಿಂದೂ ದೇವಾಲಯವೆಂದು ಘೋಷಿಸಿ ಸಮುದಾಯಕ್ಕೆ ಹಸ್ತಾಂತರಿಸಬೇಕು ಎಂದು ಹೇಳಲಾಗಿದೆ.