ಫೋರ್ಟ್ ಲಾಡರ್‌ಡೇಲ್: ವಿದೇಶಗಳಿಂದ ಬರುವಾಗ ಚಿನ್ನದ ಸಾಗಾಟ ಮಾಡುವುದು ಮಾಮೂಲು ಎನಿಸಿಕೊಂಡುಬಿಟ್ಟಿದೆ. ಭದ್ರತಾ ಸಿಬ್ಬಂದಿಗೆ ತಿಳಿಯದಂತೆ ಎಲ್ಲೆಲ್ಲಿಯೋ ಚಿನ್ನದ ವಸ್ತುಗಳನ್ನು ಅಡಗಿಸಿಕೊಂಡು ಬರುತ್ತಿದ್ದು, ಕೊನೆಗೂ ಸಿಕ್ಕಿಬೀಳುತ್ತಿದ್ದಾರೆ. ಗುದದ್ವಾರದಿಂದ ಹಿಡಿದು ಎಲ್ಲಾ ಅಂಗಾಂಗಗಳಲ್ಲಿಯೂ ಇವುಗಳನ್ನು ಇಟ್ಟುಕೊಂಡು ಬರುವುದಿದೆ.
ಆದರೆ ಇಲ್ಲೊಂದು ಘಟನೆಯಲ್ಲಿ ದಕ್ಷಿಣ ಫ್ಲೋರಿಡಾ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಪ್ರಯಾಣಿಕನೊಬ್ಬನ ಲಗೇಜ್ ಬ್ಯಾಕ್ನಲ್ಲಿ ಕಚ್ಚಾ ಕೋಳಿ ಮಾಂಸದ ಮಧ್ಯೆ ಕೈಬಂದೂಕು ಇರುವುದನ್ನು ಪತ್ತೆ ಮಾಡಿರುವ ಆತಂಕಕಾರಿ ಘಟನೆ ನಡೆದಿದೆ.
ಸಾರಿಗೆ ಭದ್ರತಾ ಆಡಳಿತವು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೋಳಿ ಮಾಂಸದ ಜತೆಗೆ ಈ ಬಂದೂಕಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಇದು ಸ್ಥಳದಲ್ಲಿ ಆತಂಕದ ವಾತಾವರಣವನ್ನು ನಿರ್ಮಿಸಿದೆ. ಫೋರ್ಟ್ ಲಾಡರ್‌ಡೇಲ್-ಹಾಲಿವುಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ತಾಜಾ ಮಾಂಸ, ಸಮುದ್ರಾಹಾರ ಮತ್ತು ದ್ರವವಲ್ಲದ ಆಹಾರ ಪದಾರ್ಥಗಳನ್ನು ಕ್ಯಾರಿ-ಆನ್ ಮತ್ತು ಚೆಕ್ಡ್ ಬ್ಯಾಗ್‌ಗಳಲ್ಲಿ ವಿಮಾನದಲ್ಲಿ ತರಲು ಅನುಮತಿ ನೀಡಲಾಗಿದೆ. ಐಸ್‌ನಲ್ಲಿ ಪ್ಯಾಕ್ ಮಾಡಲು ಅನುಮತಿ ಇದೆ. ಆದರೆ ಇದನ್ನು ಬಂಡವಾಳ ಮಾಡಿಕೊಂಡಿದ್ದ ವ್ಯಕ್ತಿ ಸಿಬ್ಬಂದಿಗೆ ತಿಳಿಯದಂತೆಯೇ ಮಾಂಸದ ಒಳಗೆ ಬಂದೂಕನ್ನು ಇಟ್ಟು ತಂದಿದ್ದ. ಆದರೆ ಪರಿಶೀಲನೆ ವೇಳೆ ಸಿಕ್ಕಿಬಿದ್ದಿದ್ದಾನೆ.