ಬೆಂಗಳೂರು: ಪೇಜಾವರ ಸ್ವಾಮೀಜಿಗಳ ಬಗ್ಗೆ ಹೇಳಿಕೆ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲಿತರ ಮನೆಗೆ ಪೇಜಾವರಶ್ರೀಗಳ ಭೇಟಿ ವಿಚಾರ ಪ್ರಸ್ತಾಪಿಸಿದ್ದ ಹಂಸಲೇಖ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹಂಸಲೇಖ ಅವರು ಕ್ಷಮೆಯಾಚಿಸಿದ ನಂತರವೂ ಆಕ್ರೋಶ ಮುಂದುವರೆದಿತ್ತು. ಕೆಲವರು ದೂರು ನೀಡಿದ್ದು, ಶ್ರೀಗಳ ಬೃಂದಾವನದ ಎದುರು ಹಂಸಲೇಖ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಬಸವನಗುಡಿ ಠಾಣೆಗೆ ದೂರು ನೀಡಲಾಗಿದ್ದು, ಈ ದೂರಿನ ಅನ್ವಯ ತನಿಖೆ ಆರಂಭಿಸಿದ ಬಸವನಗುಡಿ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಇನ್ನು ಇದೇ ವೇಳೆ ಹಂಸಲೇಖ ಅವರಿಗೆ ಬೆಂಬಲವೂ ವ್ಯಕ್ತವಾಗಿದೆ. ಡಿಎಸ್ಎಸ್, ಬಿ.ಎಸ್.ಪಿ. ಮುಖಂಡರು ಹಂಸಲೇಖ ಅವರನ್ನು ಬೆಂಬಲಿಸಿದ್ದಾರೆ. ಹಂಸಲೇಖ ಕ್ಷಮೆ ಕೋರುವಂತಹ, ಮತ್ತೊಬ್ಬರಿಗೆ ನೋವು ತರುವಂತಹ ಮಾತುಗಳನ್ನು ಆಡಿಲ್ಲ. ಪೇಜಾವರಶ್ರೀಗಳ ಬಗ್ಗೆ ಅವರಿಗೆ ಅಪಾರವಾದ ಗೌರವವಿದೆ. ಕ್ಷಮೆ ಕೇಳಿದ್ದಾರೆ ಎಂದು ಮೈಸೂರಿನಲ್ಲಿ ಮಾಜಿ ಮೇಯರ್ ಪುರುಷೋತ್ತಮ್ ಹೇಳಿದ್ದಾರೆ.