ಬೆಂಗಳೂರು: ಹಂಪಿ ಉತ್ಸವಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಈ ಬಾರಿ ಒಂದು ತಿಂಗಳು ವಿಳಂಬವಾಗಿ ಹಂಪಿ ಉತ್ಸವ ನಡೆಯಲಿದೆ. ಫೆಬ್ರವರಿ 28ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ.
ಫೆ.28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಪಿ ಉತ್ಸವ ಉದ್ಘಾಟಿಸಲಿದ್ದಾರೆ. ಫೆ.28ರಿಂದ ಮಾರ್ಚ್ 2ವರೆಗೆ ಹಂಪಿ ಉತ್ಸವ ಜರುಗಲಿದೆ. ಮಾರ್ಚ್ 1 ಮತ್ತು 2ರಂದು ಸಾಂಸ್ಕೃತಿಕ ವೈಭವಗಳು, ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ. ಮಾರ್ಚ್ 2ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಬಾರಿ ಅದ್ಧೂರಿಯಾಗಿ ಹಾಗೂ ಸಾಂಪ್ರದಾಯಿಕವಾಗಿ ಹಂಪಿ ಉತ್ಸವ ಆಚರಿಸಲಾಗುವುದು. ಉತ್ಸವದ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.