ಹಂಪೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿದೆ. ಐತಿಹಾಸಿಕ ಸ್ಥಳವಾದ ಇದು 1565 ರವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
ತುಂಗಭದ್ರಾ ನದಿಯ ದಡದಲ್ಲಿರುವ ಈ ತಾಣವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ಈ ಸಾಮ್ರಾಜ್ಯದ ಒಡೆಯನಾದ ಕೃಷ್ಣದೇವರಾಯನ ಆಡಳಿತದ ವೇಳೆ ಬೀದಿಯಲ್ಲಿ ವಜ್ರಾಭರಣಗಳನ್ನು ಮಾರಲಾಗುತ್ತಿತ್ತು ಎನ್ನಲಾಗಿದೆ.
ಇದು ಬೆಂಗಳೂರಿನಿಂದ 343 ಕಿ.ಮೀ. ವಿಜಯಪುರದಿಂದ 254 ಕಿ.ಮೀ. ಮತ್ತು ಬಳ್ಳಾರಿಯಿಂದ 74 ಕಿ.ಮೀ. ದೂರದಲ್ಲಿದೆ. ಹೊಸಪೇಟೆ ಇಲ್ಲಿಗೆ ಹತ್ತಿರದ ತಾಲೂಕು ಕೇಂದ್ರ ಕಚೇರಿ. ಕರ್ನಾಟಕ ಸರಕಾರ ಇಲ್ಲಿ ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ಹಂಪಿ ಉತ್ಸವ ನಡೆಸುತ್ತದೆ. ಇಲ್ಲಿನ ವಿರೂಪಾಕ್ಷೇಶ್ವರ ದೇವಸ್ಥಾನ ಬಹಳ ಪ್ರಸಿದ್ಧ.
ಅದರೊಂದಿಗೆ ಸೂರ್ಯಾಸ್ತದ ಸ್ಥಳಗಳು, ಅಚ್ಯುತರಾಯ ದೇಗುಲ, ಆನೆಗೊಂದಿ, ಅಂಜನಾದ್ರಿ ಪರ್ವತ, ತುಂಗಭದ್ರಾ ನದಿ, ಪುರಂದರ ಮಂಟಪ, ಕಡಲೆಕಾಳು ಗಣಪತಿ, ಸಾಸಿವೆ ಕಾಳು ಗಣಪತಿ, ರಾಣಿ ಸ್ನಾನಗೃಹ, ಹಂಪೆ ಬಜಾರ್, ಹೇಮಕೂಟ ಇಲ್ಲಿನ ಇತರ ಪ್ರೇಕ್ಷಣೀಯ ಸ್ಥಳಗಳಾಗಿವೆ.
ಕೃಷ್ಣ ದೇವರಾಯನ ಆಡಳಿತ ಅವಧಿ ಮುಗಿದ ನಂತರ ತಾಳಿಕೋಟೆ ಯುದ್ಧದಲ್ಲಿ ಇದು ಮುಸ್ಲಿಂ ಸಾಮ್ರಾಜ್ಯದ ಅಕ್ರಮಣ ತಡೆಯಲಾರದೆ ಸಂಪೂರ್ಣ ನಾಶಗೊಂಡಿತು ಎನ್ನುತ್ತದೆ ಇತಿಹಾಸ. ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿರುವ ಹಂಪೆ ಅದ್ಭುತ ಪ್ರವಾಸಿ ತಾಣ.