ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಲೇ ಕ್ಷಮೆಯಾಚಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಂಸಲೇಖ ಅವರು, ಪೇಜಾವರಶ್ರೀಗಳು, ಆಹಾರ ಪದ್ಧತಿ, ಗ್ರಾಮವಾಸ್ತವ್ಯ, ಬಿಳಿಗಿರಿ ರಂಗನಾಥಸ್ವಾಮಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿದ್ದು, ಹಂಸಲೇಖ ಅವರ ಹೇಳಿಕೆಯನ್ನು ಖಂಡಿಸಲಾಗಿದೆ.
ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಹಂಸಲೇಖ ಕ್ಷಮೆಯಾಚಿಸಿದ್ದಾರೆ. ಎಲ್ಲಾ ಮಾತುಗಳು ವೇದಿಕೆಗೆ ಅಲ್ಲ, ಕ್ಷಮೆ ಇರಲಿ. ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮುತ್ತಿನಹಾರದಂತೆ ನುಡಿಯಬೇಕಿತ್ತು. ಜಾತಿ ತಾರತಮ್ಯದ ಬಗ್ಗೆ ಮಾತನಾಡುವಾಗ ಈ ರೀತಿಯಾಗಿದೆ. ನಾನು ಯಾರಿಗೂ ನೋವು ಕೊಡಲು ಮಾತನಾಡಿಲ್ಲ. ನನಗೇಕೆ ಟ್ರೋಲ್? ನಾನು ಕಂಟ್ರೋಲ್ ಆಗಿ ಇರಬೇಕಿತ್ತು. ಸಂಗೀತಗಾರನಾಗಿ ನನ್ನ ಮಾತು, ಬದುಕು ಎಲ್ಲರಿಗೂ ಸುಖ ಕೊಡಬೇಕಿತ್ತು ಎಂದು ಹೇಳಿದ್ದಾರೆ.