
ಹಮಾಸ್ ಬಂಡುಕೋರರು ಐದು ಮಹಿಳಾ ಇಸ್ರೇಲಿ ಸೈನಿಕರನ್ನು ಸಾಲಾಗಿ ನಿಲ್ಲಿಸಿ ಹಿಂಸೆ ನೀಡಿ ದೌರ್ಜನ್ಯ ನಡೆಸಿರುವ ಘಟನೆಯ ವಿಡಿಯೋ ಬಹಿರಂಗವಾಗಿದೆ. ಹೋಸ್ಟೇಜಸ್ ಅಂಡ್ ಮಿಸ್ಸಿಂಗ್ ಫ್ಯಾಮಿಲೀಸ್ ಫೋರಂ ಬಿಡುಗಡೆ ಮಾಡಿರುವ ವಿಡಿಯೋ 2023 ಅಕ್ಟೋಬರ್ 7 ರಂದು ನಡೆದ ಘಟನೆಯದ್ದಾಗಿದೆ.
ಬಂದೂಕುಧಾರಿಗಳ ಬಾಡಿಕ್ಯಾಮ್ ಮೂಲಕ ವಿಡಿಯೋ ಸೆರೆಯಾಗಿದ್ದು ಮಹಿಳಾ ಸೈನಿಕರಿಗೆ ಕೈಕೋಳ ಹಾಕಿದ್ದು ಅವರನ್ನು ಗೋಡೆಗೆ ಒರಗಿ ನಿಲ್ಲಿಸಲಾಗಿದೆ. ಮಹಿಳೆಯರ ಮುಖದ ಮೇಲೆ ರಕ್ತ ಸೋರುತ್ತಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಜಾ ಪಟ್ಟಿಯ ಹೊರಗಿರುವ ನಹಾಲ್ ಓಝ್ ನೆಲೆಯಲ್ಲಿ ಮಹಿಳಾ ಸೈನಿಕರು ಕಾರ್ಯಾಚರಣೆ ನಡೆಸುತ್ತಿದ್ದರು. ಅವರನ್ನು ಲಿರಿ ಅಲ್ಬಾಗ್, ಕರೀನಾ ಅರಿವ್, ಆಗಮ್ ಬರ್ಗರ್, ಡೇನಿಯೆಲ್ಲಾ ಗಿಲ್ಬೋವಾ ಮತ್ತು ನಾಮಾ ಲೆವಿ ಎಂದು ಗುರುತಿಸಲಾಗಿದೆ.
ಬಂದೂಕುಧಾರಿಗಳು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡುವ ಯೋಜನೆ ಮಾಡಿದ್ದು “ಗರ್ಭಿಣಿಯಾಗಬಹುದಾದ ಹುಡುಗಿಯರು ಇಲ್ಲಿದ್ದಾರೆ”, “ನೀನು ತುಂಬಾ ಸುಂದರವಾಗಿದ್ದಿಯ” ಎಂದೆಲ್ಲಾ ಬಂಡುಕೋರರು ಮಾತಾಡಿದ್ದಾರೆ.
ನಹಾಲ್ ಓಜ್ ಬೇಸ್‌ನ ಬಾಂಬ್ ಶೆಲ್ಟರ್‌ನೊಳಗೆ ತೆಗೆದ ವೀಡಿಯೊದಲ್ಲಿ, ಬಂಡುಕೋರರು ಗಾಯಗೊಂಡ ಮಹಿಳಾ ಸೈನಿಕರನ್ನು ಪರೀಕ್ಷಿಸುತ್ತಿರುವುದನ್ನು ಕಾಣಬಹುದು. ಅವರನ್ನು “ನಾಯಿಗಳು” ಎಂದು ಕರೆದ ಅವರು ಫೋಟೋಗಳಿಗೆ ಪೋಸ್ ನೀಡುವಂತೆ ಆದೇಶಿಸುತ್ತಾರೆ. ಒಬ್ಬ ಮಹಿಳೆಯ ಮುಖದ ಮೇಲೆ ರಕ್ತ ಹರಿಯುತ್ತಿದ್ದರೆ , ಮತ್ತೊಬ್ಬರ ಬಾಯಿಯಿಂದ ರಕ್ತ ಸುರಿಯುತ್ತಿರುತ್ತದೆ.
ಇಂಗ್ಲಿಷ್‌ನಲ್ಲಿ ಮಾತನಾಡಿ ಎಂದು ಓರ್ವ ಮಹಿಳಾ ಸೈನಿಕರು ಕೇಳಿಕೊಳ್ಳುತ್ತಾರೆ. ಬಂದೂಕುಧಾರಿಗಳು ಅವರನ್ನು ಸುಮ್ಮನೆ ಕುಳಿತುಕೊಳ್ಳುವಂತೆ, ತಮ್ಮ ಸಹಚರರ ಸಾವಿಗೆ ನೀವೇ ಕಾರಣ ಎಂದು ಬಂಡುಕೋರರು ಆರೋಪಿಸುತ್ತಾ ಗದರುತ್ತಾರೆ.
ನಂತರ ಮಹಿಳೆಯರನ್ನು ಎಳೆದೊಯ್ದು ವಾಹನಕ್ಕೆ ಹತ್ತಿಸುತ್ತಾರೆ . ಈ ವೇಳೆ ಗುಂಡಿನ ಸದ್ದು ಕೇಳಿಬರುತ್ತದೆ. ಕೆಲವು ಮಹಿಳೆಯರು ಕುಂಟುತ್ತಾ, ವಾಹನಕ್ಕೆ ಕಾಲಿಡಲು ಹರಸಾಹಸ ಪಡುತ್ತಾರೆ.
ಈ ವಿಡಿಯೋ ನೋಡಿದ ಲಿರಿ ಅಲ್ಬಾಗ್ ನ ತಾಯಿ ಶಿರಾ ಈ ವಿಡಿಯೋ ನೋಡುವುದು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಹೆಣ್ಣುಮಕ್ಕಳು ಹೇಗಿದ್ದಾರೆ? ಅವರನ್ನು ಬಿಡುಗಡೆ ಮಾಡಲು ಶೀಘ್ರವಾಗಿ ಮಾತುಕತೆ ಮುಂದುವರೆಸುವಂತೆ ಒತ್ತಾಯಿಸಿದರು.