ನವದೆಹಲಿ: ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಮಾಸ್ಕ್ ಹಾಕಲಾಗುತ್ತದೆ. ಆದರೆ, ಅನೇಕರು ಅರ್ಧಂಬರ್ಧ ಮಾಸ್ಕ್ ಧರಿಸುತ್ತಾರೆ. ಹೀಗೆ ಅರ್ಧಂಬರ್ಧ ಮಾಸ್ಕ್ ಧರಿಸುವುದರಿಂದ ಮೂಗಿನ ಮೂಲಕ ಕೊರೋನಾ ವೈರಸ್ ಮೆದುಳು ಪ್ರವೇಶಿಸಲಿದೆ ಎಂದು ಅಧ್ಯಯನವೊಂದರಲ್ಲಿ ಗೊತ್ತಾಗಿದೆ.
ನೇಚರ್ ನ್ಯೂರೋ ಸೈನ್ಸ್ ಜರ್ನಲ್ ನಲ್ಲಿ ಪ್ರಕಟವಾದ ಸಂಶೋಧನೆಯ ವರದಿ ಪ್ರಕಟವಾಗಿದೆ. ಕೊರೋನಾ ರೋಗಿಗಳಲ್ಲಿ ಕಂಡು ಬರುವ ಕೆಲವು ನರವೈಜ್ಞಾನಿಕ ಲಕ್ಷಣಗಳ ಬಗ್ಗೆ ತಿಳಿಸಲಾಗಿದ್ದು, ಹೊಸ ಅಧ್ಯಯನದ ಪ್ರಕಾರ ಕೊರೋನಾ ವೈರಸ್ ಮೂಗಿನ ಮೂಲಕ ಮೆದುಳಿಗೆ ಪ್ರವೇಶಿಸಬಹುದು.
ಉಸಿರಾಟದ ಪ್ರದೇಶದ ಮೇಲೆ ಸೋಂಕು ಪರಿಣಾಮ ಬೀರುತ್ತದೆ. ಕೇಂದ್ರ ನರಮಂಡಲದ ಮೇಲೆ ಅದರ ಪರಿಣಾಮ ಬೀರಲಿದ್ದು, ಇದರಿಂದಾಗಿ ವಾಸನೆ, ರುಚಿ, ತಲೆನೋವು, ಆಯಾಸ, ವಾಕರಿಕೆ ಮೊದಲಾದ ನರವೈಜ್ಞಾನಿಕ ಲಕ್ಷಣಗಳು ಕಂಡುಬರುತ್ತವೆ. ಇತ್ತೀಚಿನ ಸಂಶೋಧನೆಗಳು ಮೆದುಳುಗಳಲ್ಲಿ ವೈರಸ್ ಇರುವಿಕೆಯನ್ನು ವಿವರಿಸಿದ್ದು, ಮೂಗಿನ ಮೂಲಕ ಮೆದುಳಿನೊಳಗೆ ಪ್ರವೇಶಿಸುತ್ತದೆ ಎಂದು ಹೇಳಲಾಗಿದೆ.