ಕುರುಕಲು ತಿಂಡಿಯಿಂದಾಗಿ ಮನೆಮಾತಾಗಿರುವ ಹಲ್ದಿರಾಮ್ ಈಗ ವಿವಾದಕ್ಕೆ ಸಿಲುಕಿದೆ. ಅದರ ಉತ್ಪನ್ನದ ಬಗ್ಗೆ ಅನುಮಾನಾಸ್ಪದ ಮಾಹಿತಿಯಿಂದ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ಅಗರ್ವಾಲ್ ಕುಟುಂಬಕ್ಕೆ ಸೇರಿದ ಹಲ್ದಿರಾಮ್ ನಮ್ಕೀನ್ ಮಿಶ್ರಣದ ಪ್ಯಾಕೇಜಿಂಗ್‌ನಲ್ಲಿ ಉರ್ದು ವಿವರಣೆ ಬಗ್ಗೆ ಆಕ್ಷೇಪಣೆ ಇದ್ದು, ಏನೋ ಮಾಹಿತಿಯನ್ನು ಮುಚ್ಚಿಡಲಾಗುತ್ತಿದೆ ಎಂಬ ಸಂಶಯ ಕಾಡಿದೆ.
ನ್ಯೂಸ್ ರಿಪೋರ್ಟರ್ ಒಬ್ಬರು ಹಲ್ದಿರಾಮ್ ಸ್ಟೋರ್ ಮ್ಯಾನೇಜರ್ ಅವರಿಗೆ ಪ್ರಶ್ನೆಮೇಲೆ ಪ್ರಶ್ನೆಹಾಕಿ ಇರುಸುಮುರುಸು ಉಂಟುಮಾಡಿರುವ ಪ್ರಸಂಗ ನಡೆದಿದ್ದು, ಆ ಸಂದರ್ಶನದ ವಿಡಿಯೋ ವೈರಲ್ ಆಗಿದೆ.
ವರದಿಗಾರರ ಪ್ರಶ್ನೆ ಎತ್ತಿರುವುದು ‘ಫಲಹಾರಿ ಮಿಶ್ರಣ್’ ಕುರಿತಾಗಿತ್ತು. ಅದರ ಪ್ಯಾಕೇಜಿಂಗ್ ಹಿಂಭಾಗದಲ್ಲಿ ವಿವರಣೆಯನ್ನು ಉರ್ದುವಿನಲ್ಲಿ ಬರೆಯಲಾಗಿದೆ. ಮುಂಭಾಗದ ಮುಖ್ಯ ಮಾಹಿತಿ ಇಂಗ್ಲಿಷ್‌ನಲ್ಲಿದೆ. ಇದು ಸಸ್ಯಾಹಾರಿ ಉತ್ಪನ್ನವಾಗಿದೆ ಎಂಬುದಕ್ಕೆ ಹಸಿರು ಚಿಹ್ನೆಯನ್ನು ಸಹ ಸ್ಪಷ್ಟವಾಗಿ ತೋರಿಸುತ್ತದೆ.
ಹಲ್ದಿರಾಮ್‌ನ ಫಲ್ಹಾರಿ ಮಿಶ್ರಣ್ ಕಡಲೆಕಾಯಿ ಮತ್ತು ಆಲೂಗಡ್ಡೆಗಳ ಸಿಹಿ ಮಿಶ್ರಿತವಾಗಿರುತ್ತದೆ. ನವರಾತ್ರಿಯ ಒಂಬತ್ತು ದಿನ ಉಪವಾಸ ಮಾಡುವವರು ಹಲ್ದಿರಾಮ್‌ನಲ್ಲಿರುವ ಜನಪ್ರಿಯ ಈ ತಿಂಡಿ ಸೇವಿಸುತ್ತಾರೆ.
ಹಿಂದಿ ಸುದ್ದಿವಾಹಿನಿಯೊಂದು ಹಲ್ದಿರಾಮ್‌ನಿಂದ ಕೆಲವು ಪ್ರಶ್ನೆಗೆ ಉತ್ತರ ಬಯಸಿದ್ದು, ಹೀಗಾಗಿ ವರದಿಗಾರರು ಹಲ್ದಿರಾಮ್ ಸ್ಟೋರ್‌ಗೆ ಭೇಟಿ ನೀಡಿ ಆನ್ ಕ್ಯಾಮರಾ ಪ್ರಶ್ನೆ ಹಾಕಿದ್ದರು.
ಅ ವರದಿಗಾರರು ಮ್ಯಾನೇಜರ್ ಮುಖದ ಮುಂದೆ ಮೈಕ್ ಇಟ್ಟು, ಉರ್ದುವಿನಲ್ಲಿ ಮಾಹಿತಿ ನೀಡಿ ನಮ್ಕೀನ್ ಪ್ಯಾಕೆಟ್‌ನ ವಿವರಣೆಯನ್ನು ಮರೆಮಾಚುವ ಮೂಲಕ ಏನನ್ನು ಮರೆಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಶ್ನೆ ಹಾಕಿದರು. ಈ ವೇಳೆ ಜನಸಮೂಹವೂ ಅಲ್ಲಿ ಸೇರಿತ್ತು, ಪೊಲೀಸರೂ ಸಹ ಸಾಕ್ಷಿಯಾಗಿದ್ದರು.
ಉತ್ತರಿಸುವಂತೆ ಒತ್ತಾಯ ಹೆಚ್ಚಿದಂತೆ ಸ್ಟೋರ್ ಮ್ಯಾನೇಜರ್ ಪ್ರತಿಕ್ರಿಯೆ ನೀಡಿ, ಪ್ಯಾಕೆಟ್‌ನೊಳಗಿನ ಆಹಾರವು ಆರೋಗ್ಯಕ್ಕೆ ಅಪಾಯಕಾರಿ ಅಲ್ಲ ಎಂದು ಹೇಳಿ, ವರದಿಗಾರರನ್ನು ಅಂಗಡಿಯಿಂದ ಹೊರಹೋಗುವಂತೆ ಸೂಚಿಸುತ್ತಾರೆ.
ನೀವು ಖರೀದಿಸುವುದಾದರೆ ಖರೀದಿಸಿ, ಇಲ್ಲವಾದರೆ ಇಟ್ಟು ಹೋಗಬಹುದು ಎಂದು ಆತ ಹೇಳುವುದೂ ಸಹ ವಿಡಿಯೋದಲ್ಲಿದೆ.
ಈ ತಿಂಡಿಯಲ್ಲಿ ಬೀಫ್ ಆಯಿಲ್ ಬಳಸಲಾಗಿದೆಯೇ? ಅದಕ್ಕಾಗಿಯೇ ಉರ್ದುವಿನಲ್ಲಿ ವಿವರಣೆ ನೀಡಿ ವಿಚಾರ ಮುಚ್ಚಿಡಲಾಗಿದೆಯೇ ಎಂಬ ಪ್ರಶ್ನೆಗೆ ವರದಿಗಾರರು ಉತ್ತರ ಬಯಸಿದ್ದರು. ಸ್ಪಷ್ಟ ಉತ್ತರ ಮಾತ್ರ ಬರಲೇ ಇಲ್ಲ.