ಬೆಂಗಳೂರು: ಮಾಜಿ ಸಚಿವ ಹಾಲಪ್ಪ ಆಚಾರ್ ಗನ್ ಮ್ಯಾನ್ ನಿಂದ ಲಕ್ಷಾಂತರ ರೂಪಾಯಿ ವಂಚನೆ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮಾಜಿ ಸಚಿವರ ಗನ್ ಮ್ಯಾನ್ ರಾಘವೇಂದ್ರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಾಯಕೊಂಡ ಗ್ರಾಮ ಪಂಚಾಯಿತಿ ಟೆಂಡರ್ ಕೊಡಿಸುತ್ತೇನೆ ಎಂದು 30 ಕೋಟಿ ವೆಚ್ಚದ ಕಾಮಗಾರಿ ಹಣ ಪಡೆದು ಹಾಲಪ್ಪ ಆಚಾರ್ ಗನ್ ಮ್ಯಾನ್ ರಾಘವೇಂದ್ರ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 30 ಕೋಟಿ ವೆಚ್ಚದ ಕಾಮಗಾರಿಗೆ 12% ಕಮಿಷನ್ ಕೇಳಿದ್ದ. ಅಲ್ಲದೇ ಅಡ್ವಾನ್ಸ್ ಕೊಡಿ ಎಂದು ಹೆಚ್.ರಾಜು ನಾಯ್ಕ್ ಎಂಬುವವರಿಂದ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ. ಬಳಿಕ ಟೆಂಡರ್ ಕೊಡದೇ ಸತಾಯಿಸಿದ್ದಾನೆ.
ಇದರಿಂದ ಬೇಸತ್ತ ಹೆಚ್.ರಾಜು, ಹಣ ವಾಪಸ್ ಕೊಡುವಂತೆ ಗನ್ ಮ್ಯಾನ್ ಗೆ ಕೇಳಿದ್ದಾರೆ. ಕೇವಲ 4 ಲಕ್ಷ ರೂಪಾಯಿ ಮಾತ್ರ ನೀಡಿದ್ದು, ಇನ್ನುಳಿದ 6 ಲಕ್ಷ ರೂಪಾಯಿ ವಂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ ಠಾಣೆಯಲ್ಲಿ ಹಾಲಪ್ಪ ಆಚಾರ್ ಗನ್ ಮ್ಯಾನ್ ರಾಘವೇಂದ್ರ ವಿರುದ್ಧ ಹೆಚ್.ರಾಜು ದೂರು ನೀಡಿದ್ದರು. ದೂರಿನನ್ವಯ ಎಫ್ಐಆರ್ ದಾಖಲಾಗಿದೆ.