ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳಿ ಕಾವಲ್ ನಲ್ಲಿ ನಿರ್ಮಿಸಿರುವ ಹೆಚ್ಎಎಲ್ ಲಘು ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಪ್ರಧಾನಿ ಮೋದಿ ಫೆಬ್ರವರಿ 13 ರಂದು ಲೋಕಾರ್ಪಣೆಗೊಳಿಸಲಿದ್ದಾರೆ.
ಸಂಸದ ಜಿ.ಎಸ್. ಬಸವರಾಜು ಈ ಬಗ್ಗೆ ಮಾಹಿತಿ ನೀಡಿದ್ದು, 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಚ್ಐಎಲ್ ಹೆಲಿಕಾಫ್ಟರ್ ಉತ್ಪಾದನಾ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಈಗ ಅವರೇ ಉದ್ಘಾಟನೆ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ತಿಳಿಸಿದ್ದಾರೆ.
ಈ ಘಟಕವನ್ನು ವಿಸ್ತರಿಸುವ ಚಿಂತನೆ ಇದ್ದು, ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಬಿದರೆಹಳ್ಳಿ ಕಾವಲ್ ಸಮೀಪ ಅರಣ್ಯ ಇಲಾಖೆಗೆ ಸೇರಿದ 1300 ಎಕರೆ ಜಾಗ ಪಡೆದು ಅರಣ್ಯ ಇಲಾಖೆಗೆ ಬೇರೆ ಕಡೆ ಜಾಗ ನೀಡುವ ಚಿಂತನೆ ನಡೆದಿದೆ ಎಂದರು.
ಗುಬ್ಬಿ ಹೆಚ್ಎಎಲ್ ಘಟಕದಲ್ಲಿ ಸದ್ಯಕ್ಕೆ 3000 ಕೆಜಿ ತೂಕದ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ನಿರ್ಮಾಣ ಮಾಡಲಿದ್ದು, ಈ ಲಘು ಹೆಲಿಕಾಪ್ಟರ್ ನಲ್ಲಿ ಐದಾರು ಮಂದಿ ಪ್ರಯಾಣಿಸಬಹುದಾಗಿದೆ. ಭೂಸೇನೆ ಮತ್ತು ವಾಯು ಸೇನೆಯಲ್ಲಿ ಇದನ್ನು ಬಳಕೆ ಮಾಡಲಾಗುವುದು ಎಂದು ಹೇಳಲಾಗಿದೆ.