ತಿರುವನಂತಪುರಂ: ತಲೆ ಕೂದಲು ಉದುರುತ್ತಿದೆ. ಇದಕ್ಕೆ ವೈದ್ಯರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಮೆಕಾನಿಕ್ ಒಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಕೋಝಿಕೋಡ್ ಜಿಲ್ಲೆಯ ಅಥೋಲಿಯಲ್ಲಿ ನಡೆದಿದೆ.
ಕೆ. ಪ್ರಶಾಂತ್ (29) ಆತ್ಮಹತ್ಯೆ ಮಾಡಿಕೊಂಡ ಯುವಕ. ಶೋ ರೂಮ್ ನಲ್ಲಿ ಮೆಕಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಶಾಂತ್ ಗೆ 2014ರಿಂದ ತಲೆ ಕೂದಲು ಉದುರಲು ಆರಂಭಿಸಿದೆಯಂತೆ. ಯಾವ ಔಷಧಿ ಮಾಡಿದರೂ ಪ್ರಯೋಜನವಾಗಿಲ್ಲ. ಇದನ್ನು ಮನಸ್ಸಿಗೆ ತುಂಬಾ ಹಚ್ಚಿಕೊಂಡು ಬೇಸರಗೊಂಡಿದ್ದ ಪ್ರಶಾಂತ್ ಕೋಝಿಕ್ಕೋಡ್ ನ ಖಾಸಗಿ ಸ್ಕಿನ್ ಸ್ಪೆಷಾಲಿಟಿ ಸೆಂಟರ್ ಗೆ ಹೋಗಿ ಚಿಕಿತ್ಸೆ ಪಡೆದಿದ್ದ. ಆದರೂ ಯಾವುದೇ ಪರಿಣಾಮವಾಗಲಿಲ್ಲ. ದಿನಕಳೆದಂತೆ ಇನ್ನಷ್ಟು ಕೂದಲು ಉದುರತೊಡಗಿದೆ.
ಬೇಸತ್ತ ಪ್ರಶಾಂತ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಿನಕಳೆದಂತೆ ಕೂದಲು ಉದುರತೊಡಗಿದೆ. ಕಣ್ಣು ಹುಬ್ಬಿನ ಕೂದಲೂ ಬೀಳುತ್ತಿದೆ. ಇದರಿಂದ ಯಾವುದೇ ಕಾರ್ಯಕ್ರಮಗಳಿಗೆ, ಸಭೆ ಸಮಾರಂಭಕ್ಕೆ ಹೋಗುವುದನ್ನು ನಿಲ್ಲಿಸಿದ್ದೇನೆ. ಅಲ್ಲದೇ ಸ್ನೇಹಿತರ ಜೊತೆಯೂ ಮಾತನಾಡುತ್ತಿಲ್ಲ. ಕೂದಲುದುರುವ ಸಮಸ್ಯೆಯಿಂದಾಗಿಯೇ ನನಗೆ ಮದುವೆಯೂ ಆಗಿಲ್ಲ. ಕೋಝಿಕ್ಕೋಡ್ ಡಾಕ್ಟರ್ ಬಳಿ ಹೋಗಿ ಚಿಕಿತ್ಸೆ ಪಡೆದ ಬಳಿಕ ಕೂದಲು ಉದುರುವುದು ಇನ್ನಷ್ಟು ಜಾಸ್ತಿ ಆಗಿದೆ. ಸುಳ್ಳು ಹೇಳಿ ಔಷಧ ಕೊಟ್ಟಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕುಟುಂಬದವರು ಅಥೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.