ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿನ ಜಾತಿ ತಾರತಮ್ಯ ಕೊನೆಗಾಣಿಸಲು ಸಮಾಜ ಕಲ್ಯಾಣ ಇಲಾಖೆ ಯೋಜನೆ ರೂಪಿಸಿದ್ದು, ಸರ್ಕಾರದಿಂದಲೇ ಗ್ರಾಮೀಣ ಪ್ರದೇಶದಲ್ಲಿ ಅಂಗಡಿಗಳನ್ನು ಕ್ಷೌರದಂಗಡಿ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ರಾಜ್ಯದ ಅನೇಕ ಗ್ರಾಮೀಣ ಪ್ರದೇಶದ ಕ್ಷೌರದಂಗಡಿಗಳಲ್ಲಿ ಜಾತಿ ಆಧಾರಿತ ತಾರತಮ್ಯ ನಡೆಯುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಸರ್ಕಾರದಿಂದಲೇ ಕ್ಷೌರದಂಗಡಿ ಆರಂಭಿಸಲು ಸಮಾಜ ಕಲ್ಯಾಣ ಇಲಾಖೆ ಚಿಂತನೆ ನಡೆಸಿದೆ.
ಕೇರಳದಲ್ಲಿ ಸರ್ಕಾರದಿಂದ ಕ್ಷೌರದಂಗಡಿಗಳನ್ನು ಆರಂಭಿಸಲಾಗಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಕ್ಷೌರದಂಗಡಿಗಳನ್ನು ತೆರೆಯಲು ಅನುಮತಿ ನೀಡುವಂತೆ ಸಿಎಂ ಯಡಿಯೂರಪ್ಪನವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.
ಹಲವು ಗ್ರಾಮದಲ್ಲಿ ಜಾತಿ ತಾರತಮ್ಯದಿಂದ ಕ್ಷೌರ ಮಾಡಲು ನಿರಾಕರಿಸಲಾಗುತ್ತಿದೆ. ಇಂತಹ ಅನೇಕ ಪ್ರಕರಣಗಳು ದಾಖಲಾಗುತ್ತಿದ್ದು, ಗ್ರಾಮ ಪಂಚಾಯಿತಿಗಳ ಮೂಲಕ ಕ್ಷೌರದಂಗಡಿ ತೆರೆಯಲು ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಮಂಜೂರು ಮಾಡಬಹುದು ಎಂದು ಹೇಳಲಾಗಿದೆ.
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಪ್ರಸ್ತಾಪ ಮುಂದಿಡಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.