ಮೊಬೈಲ್ ಸೆಕ್ಯೂರಿಟಿ ಸಲ್ಯೂಷನ್ ಸಂಸ್ಥೆಯಾದ ಪ್ರಡಿಯೋ, ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಹೊಸ ಆ್ಯಪ್ಗಳಿಗೆ ಕುಖ್ಯಾತ ಜೋಕರ್ ಮಾಲ್‌ವೇರ್ ಅಟ್ಯಾಕ್ ಮಾಡುವ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ಜೋಕರ್ ಮಾಲ್‌ವೇರ್ ಈಗಾಗಲೇ ಪ್ಲೇ ಸ್ಟೋರ್ನಲ್ಲಿರುವ 15 ಪ್ರಸಿದ್ಧ ಅಪ್ಲಿಕೇಶನ್ಗಳ ಮೇಲೆ ಅಟ್ಯಾಕ್ ಮಾಡಿದೆಯಂತೆ. ಈ ಮಾಲ್‌ವೇರ್ ಕಳೆದ ವರ್ಷ ಕೂಡ ದೊಡ್ಡ ಮಟ್ಟದ ಮೊಬೈಲ್ ಭದ್ರತಾ ಅಪಾಯವನ್ನು ತಂದೊಡ್ಡಿತ್ತು.
ಕಳೆದ ವರ್ಷ ಗೂಗಲ್ ಮಧ್ಯಪ್ರವೇಶದ ಹೊರತಾಗಿಯೂ ಗೂಗಲ್ನ ಭದ್ರತೆಯನ್ನು ಬೈಪಾಸ್ ಮಾಡಲು ಅದರ ಕೋಡ್‌ಗೆ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಜೋಕರ್ ಮಾಲ್‌ವೇರ್ ಯಶಸ್ವಿಯಾಗಿ ಮರಳಿದೆ.
ಇತ್ತೀಚೆಗಷ್ಟೇ, ಸೈಬರ್ ಸೆಕ್ಯೂರಿಟಿ ಸಂಸ್ಥೆಯಾದ ಕ್ಯಾಸ್ಪರ್ ಸ್ಕೈ ಜೋಕರ್ ಮಾಲ್‌ವೇರ್ ಕನಿಷ್ಟ 14 ಆಂಡ್ರಾಯ್ಡ್ ಅಪ್ಲಿಕೇಶನ್ಗೆ ತಗುಲಿದೆ ಎಂಬುದನ್ನು ಕಂಡು ಹಿಡಿದಿದ್ದಾರೆ.
ಈ ಮಾಲ್ವೇರ್ನ್ನು ಮೊಟ್ಟ ಮೊದಲ ಬಾರಿಗೆ 2017ರಲ್ಲಿ ಕಂಡು ಹಿಡಿಯಲಾಗಿದೆ. ಇದನ್ನು ನಿಭಾಯಿಸುವುದು ಗೂಗಲ್ಗೆ ಅತೀ ದೊಡ್ಡ ಸವಾಲಾಗಿದೆ.
ಪ್ರಡಿಯೋ ನೀಡಿರುವ ವರದಿಯ ಪ್ರಕಾರ 5 ಲಕ್ಷ ಜನರು ಬಳಕೆ ಮಾಡುತ್ತಿರುವ ಕಲರ್ ಮೆಸೇಜ್ ಎಂಬ ಅಪ್ಲಿಕೇಶನ್ ಇತ್ತೀಚೆಗಷ್ಟೇ ಜೋಕರ್ ಮಾಲ್ವೇರ್ನಿಂದ ದಾಳಿಗೊಳಗಾಗಿದೆ. ಈ ಅಪ್ಲಿಕೇಶನ್ ರಷ್ಯಾದ ಸರ್ವರ್ಗಳ ಜೊತೆ ಸಂಪರ್ಕ ಸಾಧಿಸುತ್ತದೆ ಎಂದು ವರದಿ ಹೇಳಿದೆ.
ಏನಿದು ಜೋಕರ್ ಮಾಲ್‌ವೇರ್..?
ಜೋಕರ್ ಮಾಲ್‌ವೇರ್ ಎಂಬುದು ಫ್ಲೀಸ್ವೇರ್ ವರ್ಗಕ್ಕೆ ಸೇರುತ್ತದೆ. ಇದು ನಿಮಗೆ ಮಾಹಿತಿ ನೀಡದೆಯೇ ನಿಮ್ಮ ಖಾತೆಯಲ್ಲಿರುವ ಹಣವನ್ನು ಕದಿಯುತ್ತದೆ. ಈ ಮಾಲ್‌ವೇರ್ ನಿಮಗೆ ತಿಳಿಯದಂತೆ ನಿಮ್ಮನ್ನು ಅನಗತ್ಯ ಪ್ರೀಮಿಯಂ ಸೇವೆಗಳಿಗೆ ಚಂದಾದಾರರನ್ನಾಗಿ ಮಾಡುತ್ತದೆ.
ನಿಮ್ಮಿಂದ ಯಾವುದೇ ಅನುಮತಿಯನ್ನು ಪಡೆಯದೇ ನಿಮ್ಮನ್ನು ಆನ್ಲೈನ್ ಸೇವೆಗಳಿಗೆ ಚಂದಾದಾರನ್ನಾಗಿ ಮಾಡುತ್ತದೆ. ಆನ್ಲೈನ್ ಜಾಹೀರಾತುಗಳ ಮೇಲೆ ಸ್ವಯಂ ಪ್ರೇರಿತವಾಗಿ ಕ್ಲಿಕ್ ಮಾಡುವ ಸಾಮರ್ಥ್ಯ ಈ ಮಾಲ್ವೇರ್ಗೆ ಇದೆ. ಈ ಮಾಲ್‌ವೇರ್ ಎಷ್ಟರ ಮಟ್ಟಿಗೆ ಅಪಾಯಕಾರಿ ಅಂದರೆ ನಿಮ್ಮ ಒಟಿಪಿಯನ್ನು ಓದುವ ಸಾಮರ್ಥ್ಯ ಕೂಡ ಇದಕ್ಕೆ ಇದೆ.
ತಕ್ಷಣವೇ ಡಿಲೀಟ್ ಮಾಡಬೇಕಾದ ಏಳು ಆಪ್ ಗಳ ಪಟ್ಟಿ ಇಲ್ಲಿದೆ
1. Color Message
2. Safety AppLock
3. Convenient Scanner 2
4. Push Message-Texting&SMS
5. Emoji Wallpaper
6. Separate Doc Scanner
7. Fingertip GameBox