ದೇಶದಲ್ಲಿ H3N2 ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಅನೇಕರಿಗೆ ಉಸಿರಾಟದ ತೊಂದರೆಗೆ ಕಾರಣವಾಗಿದೆ. ಕಳೆದ ಕೆಲ ದಿನಗಳಿಂದ ಈ ಸೋಂಕಿನ ಪಸರುವಿಕೆ ಇನ್ನಷ್ಟು ಜೋರಾಗಿದೆ.
ಸೋಂಕಿನ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಪುದುಚೆರಿಯಲ್ಲಿ ಮಾರ್ಚ್ 16ರಿಂದ ಮಾರ್ಚ್ 26ರವರೆಗೂ ಹತ್ತು ದಿನಗಳ ಮಟ್ಟಿಗೆ 1ನೇ ತರಗತಿಯಿಂದ 8ನೇ ತರಗತಿವರೆಗೂ ರಜೆ ಘೊಷಿಸಲಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಅನುಸಾರ ಭಾರತದಲ್ಲಿ ಜನವರಿ 2ರಿಂದ ಮಾರ್ಚ್ 5ರವರೆಗೆ H3N2ನ 451 ಪ್ರಕರಣಗಳು ದಾಖಲಾಗಿದೆ.
ಗುಜರಾತ್‌ನಲ್ಲಿ ಸೋಮವಾರ H3N2 ವೈರಸ್‌ನ ಮೊದಲ ಸಾವು ವರದಿಯಾಗಿದೆ. ಕರ್ನಾಟಕದಲ್ಲಿ ಹಾಸನ ಜಿಲ್ಲೆಯಲ್ಲಿ 82 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಇದೇ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೂ ದೇಶಾದ್ಯಂತ 7 ಮಂದಿ ಈ ವೈರಸ್‌ಗೆ ಬಲಿಯಾಗಿದ್ದಾರೆ.
H3N2ನ ರೋಗಲಕ್ಷಣಗಳು
ದೇಹದ ವಿವಿಧ ಭಾಗಗಳಲ್ಲಿ ನೋವು, ಜ್ವರ, ಚಳಿ, ಸುಸ್ತು, ಡಯಾರಿಯಾ, ವಾಂತಿ, ಕೆಮ್ಮು, ಗಂಟಲು ಕೆರೆತ, ಮೂಗು ಸುರಿತ ಹಾಗೂ ತಲೆನೋವು.
ಈ ಸೋಂಕು ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದ, ಸೀನಿದ, ಅಥವಾ ಮಾತನಾಡುವ ವೇಳೆ ಹೊರಬರುವ ಹನಿಗಳಿಂದ ಹಬ್ಬುತ್ತವೆ. ಗರ್ಭಿಣಿಯರು, ಹಿರಿಯರು, ಮಕ್ಕಳು ಮತ್ತು ಅನಾರೋಗ್ಯ ಪೀಡಿತ ಮಂದಿಗೆ ಈ ಸೋಂಕು ಹಬ್ಬುವ ಸಾಧ್ಯತೆ ಬಹಳ ಹೆಚ್ಚಿರುತ್ತದೆ.