ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷಾ ದಿನಾಂಕವನ್ನ ಪ್ರಕಟಿಸಿದ ಬಳಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಾಕಷ್ಟು ವಿರೋಧಗಳನ್ನ ಎದುರಿಸುತ್ತಿದ್ದಾರೆ. ತಜ್ಞರ ಜೊತೆ ಚರ್ಚಿಸಿಯೇ ಈ ನಿರ್ಧಾರಕ್ಕೆ ಬರಲಾಗಿದೆ ಎಂಬ ಸರ್ಕಾರದ ಹೇಳಿಕೆಯ ಹೊರತಾಗಿಯೂ ರಾಜಕೀಯ ನಾಯಕರು ಸರ್ಕಾರದ ನಡೆಯನ್ನ ಖಂಡಿಸುತ್ತಿದ್ದಾರೆ.
ಪಕ್ಷದ ವಿರುದ್ಧ ಸದಾ ಬುಸುಗುಡತ್ತಲೇ ಇರೋ ಎಂಎಲ್ಸಿ ಹೆಚ್. ವಿಶ್ವನಾಥ್ ಕೂಡ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಮೈಸೂರಿನಲ್ಲಿ ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇನ್ನೇನು 10 ರಿಂದ 15 ದಿನಗಳಲ್ಲಿ ಕೊರೊನಾ ಮೂರನೇ ಅಲೆ ಆರಂಭವಾಗಲಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ಮಾಡಿದರೆ ಮಕ್ಕಳ ಕತೆ ಏನಾಗಬೇಡ..? ತಾನು ಹೇಳಿದ್ದೇ ನಡೆಯಬೇಕು ಎಂಬ ಅಹಂನಲ್ಲಿ ಸರ್ಕಾರ ಮಕ್ಕಳನ್ನೇ ಮರೆತಿದೆ ಎಂದು ಗುಡುಗಿದ್ದಾರೆ.
ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ ಕಾಗೇರಿ, ತನ್ವೀರ್ ಸೇಠ್ ಹಾಗೂ ನಾನು ಸೇರಿದಂತೆ ಅನೇಕರು ಇದ್ದೇವೆ. ಶಿಕ್ಷಣ ಇಲಾಖೆಯಲ್ಲಿ ಆಯುಕ್ತರಾಗಿ, ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ಹಿರಿಯ ಅಧಿಕಾರಿಗಳೂ ಇದ್ದಾರೆ. ಆದರೆ ಸರ್ಕಾರ ಪ್ರತಿಪಕ್ಷದವರು ಸೇರಿದಂತೆ ಯಾರ ಅಭಿಪ್ರಾಯವನ್ನೂ ಕೇಳಿಲ್ಲ. ಮಕ್ಕಳನ್ನ ಸಾಯಿಸಬೇಕು ಎಂದುಕೊಂಡಿದ್ದೀರಾ..? ಶಿಕ್ಷಕರನ್ನ, ಪೋಷಕರನ್ನ ಬಲಿ ಪಡೆಯುವ ಅಧಿಕಾರ ಸರ್ಕಾರಕ್ಕಿಲ್ಲ. ಕೇಂದ್ರ ಸರ್ಕಾರ ದೊಡ್ಡ ದೊಡ್ಡ ಪರೀಕ್ಷೆಗಳನ್ನೇ ರದ್ದು ಮಾಡಿದೆ. ಅಂತದ್ರಲ್ಲಿ ಶಿಕ್ಷಣ ಸಚಿವರು ಯಾವ ಹಠಕ್ಕೆ ಈ ಪರೀಕ್ಷೆ ಮಾಡುತ್ತಿದ್ದಾರೆ..? ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೀವ ಹಾಗೂ ಜೀವನವನ್ನ ತೆಗೆಯಲು ಈ ರೀತಿ ಮಾಡ್ತಿದ್ದಾರೆ ಎಂದು ಹೇಳಿದ್ರು.