ಮೈಸೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹೋರಾಟ ಸಚಿವ ಈಶ್ವರಪ್ಪ ಅಥವಾ ನನಗೆ ಪ್ರತಿಷ್ಠೆಯ ಹೋರಾಟವಲ್ಲ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹೋರಾಟದ ಹಿಂದೆ ಆರ್.ಎಸ್.ಎಸ್. ಪಾತ್ರವಿದ್ದರೆ ತಪ್ಪೇನು ಎಂದು ಅವರು ಪ್ರಶ್ನಿಸಿದ್ದಾರೆ.
ಇದೊಂದು ಸಮುದಾಯದ ಹೋರಾಟವಾಗಿದೆ. ಯಾರ ಪ್ರತಿಷ್ಠೆಗಾಗಿಯೂ ಹೋರಾಟ ನಡೆಸುತ್ತಿಲ್ಲ. ನಾವು ಎಲ್ಲರ ಬೆಂಬಲವನ್ನು ಕೋರಿದ್ದೇವೆ. ಸಿದ್ದರಾಮಯ್ಯನವರು ನೇತೃತ್ವ ವಹಿಸಿಕೊಳ್ಳುವುದಾದರೇ ಅವರೇ ನಾಯಕತ್ವ ವಹಿಸಿಕೊಳ್ಳಲಿ. ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು, ಯುವ ಘಟಕಗಳು, ಮೇಲ್ವರ್ಗದವರು ನಮ್ಮ ಹೋರಾಟಕ್ಕೆ ಬೆಂಬಲ ನೀಡಲಿ ಎಂದು ತಿಳಿಸಿದ್ದಾರೆ.
ನಾವು ಎಲ್ಲರ ಬೆಂಬಲವನ್ನು ಕೇಳಿದ್ದೇವೆ. ಮೈಸೂರಿನ ಸಿದ್ದಾರ್ಥ ನಗರದ ಕನಕ ಭವನದಲ್ಲಿ ಡಿಸೆಂಬರ್ 29 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳ ಕುರುಬ ಸಮುದಾಯದ ಮುಖಂಡರ ಸಭೆ ಕರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.