ಬೆಂಗಳೂರು: ಮುಳಬಾಗಿಲು ಶಾಸಕ, ಅಬಕಾರಿ ಸಚಿವ ಹೆಚ್. ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡಲಾಗುತ್ತೆ ಎಂಬ ವದಂತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿವಾಸದ ಬಳಿ ಅವರ ಬೆಂಬಲಿಗರು ಸೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಿದ್ದೆ ನಾಗೇಶ್. ಉಳಿದ 17 ಶಾಸಕರ ಜೊತೆ ಕೈಜೋಡಿಸಿ ಬಿಜೆಪಿ ಸರ್ಕಾರ ತಂದಿದ್ದಾರೆ. 3 ವರ್ಷ ನೀವು ಸಚಿವರಾಗಿ ಇರುತ್ತಿರಾ ಎಂದು ಅವರಿಗೆ ಹೇಳಿದ್ದರು. ಈಗ ನಾಗೇಶ್ ಅವರನ್ನು ಕೈಬಿಡುವ ಮಾತುಗಳು ಕೇಳಿಬರುತ್ತಿವೆ ಎಂದು ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಗೇಶ್ ತಮ್ಮ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ಅವರಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳು ಬಂದಿವೆ. ಬಿಜೆಪಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಒಂದು ವೇಳೆ ನಾಗೇಶ್ ಅವರನ್ನು ಸಂಪುಟದಿಂದ ಕೈ ಬಿಟ್ಟರೆ ಬಿ.ಎಸ್.ವೈ. ಅವರಿಗೆ ವಚನಭ್ರಷ್ಟ ಸಿಎಂ ಎನ್ನುವ ಪಟ್ಟ ಕಟ್ಟಬೇಕಾಗುತ್ತದೆ. ಕೋಲಾರದಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡುತ್ತೇವೆ ಎಂದು ಸಿಎಂ ನಿವಾಸದ ಬಳಿ ಹೆಚ್. ನಾಗೇಶ್ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ.