ಮಂಡ್ಯ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮಂಡ್ಯ ಟಿಕೆಟ್ ಗಾಗಿ ಕಾಂಗ್ರೆಸ್ ನಲ್ಲಿ ಪೈಪೋಟಿ ಆರಂಭವಾಗಿದೆ. ವೆಂಕಟರಮಣ ಅಲಿಯಾಸ್ ಸ್ಟಾರ್ ಚಂದ್ರುಗೆ ಕಾಂಗ್ರೆಸ್ ಮಣೆಹಾಕುತ್ತಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹೆಚ್.ಎನ್.ರವೀಂದ್ರ ರಾಜೀನಾಮೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನ್ನ ಮೇಲೆ ನಂಬಿಕೆ ಇಟ್ಟು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದರು. ಆದರೆ ಈಗ ವಾತಾವರಣ ಕಲುಷಿತವಾಗಿದೆ. ಹೀಗಾಗಿ ಬೇಸರದಿಂದ ರಾಜೀನಾಮೆ ನೀಡಿದ್ದೇನೆ ಎಂದು ರವೀಂದ್ರ ತಿಳಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಸ್ಪರ್ಧಿಸಲು ಅವಕಾಶ ಕೊಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಕಡೆಗಳಿಗೆಯಲ್ಲಿ ಮೇಲುಕೋಟೆ ಕ್ಷೇತ್ರವನ್ನು ರೈತ ಸಂಘಕ್ಕೆ ಬಿಟ್ಟುಕೊಡುವ ಬಗ್ಗೆ ಸೌಜನ್ಯಕ್ಕೂ ಚರ್ಚಿಸದೇ ತೀರ್ಮಾನ ಕೈಗೊಂಡರು. ಇದರಿಂದ ಕಾರ್ಯಕರ್ತರು, ಸ್ಥಳೀಯರು ನಿಮಗೆ ಗುಲಾಮರು, ನೀವು ಹೇಳಿದ ಹಾಗೆ ಕುಣಿಯುವ ಗೊಂಬೆಗಳು ನಾವು ಎಂದು ಬೇಸರ ವ್ಯಕ್ತಪಡಿಸಿದರು. ಪಕ್ಷ ಸೂಚಿಸಿದ ಹಿನ್ನೆಲೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ಮಾಡಿದ್ದೇನೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಕಾಂಗ್ರೆಸ್ ನಲ್ಲಿ ಟಿಕೆಟ್ ಪಡೆಯಲು ದುಡ್ಡೆ ಮಾನದಂಡ. ಹಣ ಇದ್ದವರನ್ನು ಪಕ್ಷಕ್ಕೆ ಕರೆದುಕೊಂಡು ಬರ್ತಾರೆ ಎಂದು ಆರೋಪಿಸಿದ್ದಾರೆ.