ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾದ 14 ನಿವೇಶನಗಳನ್ನು ವಾಪಾಸ್ ನೀಡುವುದಾಗಿ ಪತ್ರ ಬರೆದಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಅವರ ನಿರ್ಧಾರ, ಸ್ಪಂದನೆ ನಿಜಕ್ಕೂ ಮೆಚ್ಚಲೇ ಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 14 ನಿವೇಶನ ವಾಪಾಸ್ ನೀಡಿದರೂ ತನಿಖೆ ಮುಂದುವರೆಯಲಿದೆ. ಮುಡಾ ಪ್ರಕರಣದ ತನಿಖೆ ಬಗ್ಗೆ ಕೋರ್ಟ್ ಆದೇಶ ನೀಡಿರುವುದರಿಂದ ಲೋಕಾಯುಕ್ತ ತನಿಖೆ ಮುಂದುವರೆಯಲಿದೆ ಎಂದು ಹೇಳಿದರು.
ಮುಡಾ ಪ್ರಕರಣದಲ್ಲಿ ಇಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿರುವುದು ನ್ಯಾಯಸಮ್ಮತವಲ್ಲ. ಇಲ್ಲಿ ಹಣಕಾಸು ಅವ್ಯವಹಾರ, ಅಕ್ರಮ ವರ್ಗಾವಣೆ ನಡೆದಿಲ್ಲ. ಹಣಕಾಸು ಅವ್ಯವಹಾರ ಎಲ್ಲಿ ಆಗಿದೆ? ಇದು ದಶಕದ ಹಿಂದೆ ಆಗಿರುವ ಪ್ರಕರಣ. ಇಡಿ ಪ್ರಕರಣ ದಾಖಲಿಸಿಕೊಂಡಿರುವುದು ರಾಜಕೀಯ ದುರುದ್ದೇಶ ಹಾಗೂ ದ್ವೇಷ ರಾಜಕಾರಣದಿಂದ ಎಂದು ಕಿಡಿಕಾರಿದರು.
ಇನ್ನು ಸಿಎಂ ಪತ್ನಿ ಪಾರ್ವತಿಯವರು ಸೈಟ್ ವಾಪಾಸ್ ಕೊಡುತ್ತಿರುವುದು ಸ್ವತಃ ಸಿಎಂ ಅವರಿಗೂ ಅಚ್ಚರಿ ತಂದಿದೆ. ಸಿಎಂ ಘನತೆ, ಗೌರವಕ್ಕೆ ಧಕ್ಕೆಯಾಗಿದ್ದಕ್ಕೆ ನಿವೇಶನ ವಾಪಾಸ್ ನೀಡುತ್ತಿದ್ದಾರೆ. ಸಹೋದರಿ ಪಾರ್ವತಿ ಮಾನಸಿಕವಾಗಿ ಆಘಾತಗೊಂಡಿದ್ದಾರೆ. ಒಬ್ಬ ಗೃಹಿಣಿಯಾಗಿ ಅವರು ಅಪಪ್ರಚಾರ, ರಾಜಕೀಯ ದುರುದ್ದೇಶದಿಂದ ಘಾಸಿಗೊಂಡಿದ್ದಾರೆ. ಹಾಗಾಗಿ ಸೈಟ್ ವಾಪಾಸ್ ಕೊಡಲು ಮುಂದಾಗಿದ್ದಾರೆ. ಈ ರೀತಿ ಸ್ಪಂದನೆ ನಿಜಕ್ಕೂ ಮೆಚ್ಚಬೇಕು ಎಂದು ಹೇಳಿದರು.