ಬೆಂಗಳೂರು: ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿದೆ.
ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಆರಂಭವಾಗಿದ್ದು, ಇದೇ ಪ್ರಕರಣದಲ್ಲಿ ರೇವಣ್ಣ ವಿರುದ್ಧ ಸೆಕ್ಷನ್ 376 ಅಡಿ ಎಫ್ ಐ ಆರ್ ದಾಖಲಾಗಿದೆ. ಹಾಗಾಗಿ ಜಾಮೀನಿಗೆ ನಮ್ಮ ಆಕ್ಷೇಪಣೆ ಇದೆ ಎಂದು ಎಸ್ ಪಿಪಿ ವಾದ ಮಂಡಿಸಿದ್ದಾರೆ.
ಅಲ್ಲದೇ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರೇವಣ್ಣ ಅವರಿಗೆ 2 ಬಾರಿ ನೋಟಿಸ್ ನೀಡಲಾಗಿದೆ. ಆದಾಗ್ಯೂ ವಿಚಾರಣೆಗೆ ಹಾಜರಾಗಿಲ್ಲ. ಹಾಗಾಗಿ ರೇವಣ್ಣ ಅವರನ್ನು ಎಸ್ಐಟಿ ಕಸ್ಟಡಿಗೆ ನೀಡುವಂತೆ ಎಸ್ಐಟಿ ಪರ ವಕೀಲೆ ಜಾಯ್ನಾ ಕೊಠಾರಿ ಮನವಿ ಮಾಡಿದ್ದಾರೆ. ಈ ವೇಳೆ ರೇವಣ್ಣ ಖುದ್ದು ಹಾಜರಾಗುವಂತೆ ಕೋರ್ಟ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕೋರ್ಟ್ ಗೆ ಹಾಜರಾಗಿದ್ದಾರೆ.
ಎಸ್ ಐಟಿ ಪರ ವಕೀಲರು ಹಾಗೂ ರೇವಣ್ಣ ಪರ ವಕೀಲರು ಇಬ್ಬರ ವಾದ-ಪ್ರತಿ ವಾದ ಆಲಿಸಿದ ಕೋರ್ಟ್ ಜಾಮೀನು ಅರ್ಜಿ ವಿಚಾರಣೆ ಕುರಿತ ಆದೇಶವನ್ನು ಕಾಯ್ದಿರಿಸಿದೆ. ಕೆಲವೇ ಹೊತ್ತಲ್ಲಿ ಕೋರ್ಟ್ ಆದೇಶ ಪ್ರಕಟಿಸಲಿದೆ.