
ಬೆಂಗಳೂರು: ಸಂತ್ರಸ್ತ ಮಹಿಳೆ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಸಕ ಹೆಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿದೆ.
ಬಂಧನ ಭೀತಿಯಲ್ಲಿದ್ದ ಹೆಚ್.ಡಿ. ರೇವಣ್ಣ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚರಣೆ ನಡೆಸಿದ ನ್ಯಾಯಾಲಯ ರೇವಣ್ಣಪರ ವಕೀಲರು ಹಾಗೂ ಎಸ್ ಐಟಿ ಪರ ವಕೀಲರ ವಾದ-ಪ್ರತಿವಾದವನ್ನು ಆಲಿಸಿತು.
ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ್ದು ಯಾರು? ಇದರಲ್ಲಿ ಪ್ರಜ್ವಲ್ ಪಾತ್ರವಿದೆಯಾ ಗೊತ್ತಿಲ್ಲ. ಸಂತ್ರಸ್ತ ಮಹಿಳೆ ದೂರು ನೀಡದಂತೆ ತಡೆಯಲು ಅಪಹರಿಸಲಾಗಿದೆಯಾ? ನಮ್ಮ ಮೊದಲ ಉದ್ದೇಶ ಮಹಿಳೆಯ ಜೀವ ರಕ್ಷಿಸಿ ಸ್ವತಂತ್ರಗೊಳಿಸುವುದು. ನಮ್ಮ ಪೊಲೀಸರು ಆಕೆಯನ್ನು ಹಗಲು ರಾತ್ರಿ ಹುಡುಕುತ್ತಿದ್ದಾರೆ ಎಂದು ಎಸ್ ಐಟಿ ಎಸ್ ಪಿಪಿ ಪರ ಬಿ.ಎನ್.ಜಗದೀಶ್ ವಾದ ಮಂಡಿಸಿದ್ದಾರೆ. ಈ ವೇಳೆ ರೇವಣ್ಣ ಎಸ್ ಐಟಿ ವಿಚಾರಣೆಗೆ ಹಾಜರಾಗಲು ಸಿದ್ಧರಿದ್ದಾರೆ ಎಂದು ರೇವಣ್ಣ ಪರ ವಕೀಲರು ಕೋರ್ಟ್ ಗೆ ತಿಳಿಸಿದ್ದಾರೆ.
ಆದರೆ ರೇವಣ್ಣ ಉತ್ತರ ಕರ್ನಾಟಕ ಭಾಗದಲ್ಲಿ ತಾವು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಿದ್ದು, ಹಾಗಾಗಿ ವಿಚಾರಣೆಗೆ ಹಾಜರಾಗಲು ಸಮಯ ಬೇಕು ಎಂದು ರೇವಣ್ಣ ಎಸ್ ಐಟಿಗೆ ಕೋರಿದ್ದಾರೆ. ಅಂದರೆ ರೇವಣ್ಣ ಅವರು ವಿಚಾರಣೆಗೆ ಹಾಜರಾಗುವ ಉದ್ದೇಶದಲ್ಲಿ ಇಲ್ಲ ಎಂಬುದು ಅರ್ಥವಾಗುತ್ತದೆ ಎಂದು ಎಸ್ ಐಟಿ ಪರ ವಕೀಲರು ವಾದ ಮಂಡಿಸಿದ್ದಾರೆ. ಎರಡೂ ಕಡೆ ವಾದ ಆಲಿಸಿದ ಕೋರ್ಟ್ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿದೆ.
ಸಂತ್ರಸ್ತ ಮಹಿಳೆ ತನ್ನ ತಾಯಿಯಾಗಿದ್ದು, ಆಕೆಯನ್ನು ಅಪಹರಿಸಲಾಗಿದೆ ಎಂದು ಮಹಿಳೆಯ ಮಗ ಮೈಸೂರಿನ ಕೆ.ಆರ್.ನಗರ ಠಾಣೆಯಲ್ಲಿ ದೂರು ನೀಡಿದ್ದರು. ಮಗನ ದೂರಿನ ಹಿನ್ನೆಲೆಯಲ್ಲಿ ಶಾಸಕ ಹೆಚ್.ಡಿ.ರೇವಣ್ಣ ಹಾಗೂ ಭವಾನಿ ರೇವಣ್ಣ ಸಂಬಂಧಿ ಸತೀಶ್ ಬಾಬು ವಿರುದ್ಧ ಕಿಡ್ನ್ಯಾಪ್ ಕೇಸ್ ಹಾಗೂ ಅಕ್ರಮ ಬಂಧನ ಅಡಿಯಲ್ಲಿ ಎಫ್ ಐಆರ್ ದಾಖಲಾಗಿತ್ತು.