ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ದಲಿತ ವಿಕಲಚೇತನ ವ್ಯಕ್ತಿಗೆ ಹಂಚಿಕೆಯಾಗಿದ್ದ ಸೈಟ್ ನಲ್ಲಿ ಸಿದ್ದರಾಮಯ್ಯ ಮನೆ ಕಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಆರೋಪ ಕೋರ್ಟ್ ಮೆಟ್ಟಿಲೇರಿದ್ದು, ಇನ್ನೇನು ಮುಗಿಯುವ ಹಂತದಲ್ಲಿದೆ ಎನ್ನುವಾಗಲೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯನವರು ಡಿಸಿಎಂ ಆಗಿದ್ದಾಗ ಒಂದು ಮನೆ ಕಟ್ಟಿದ್ದರು. ಯಾರ ಜಾಗದಲ್ಲಿ ನೀವು ಮನೆ ಕಟ್ಟಿದ್ದೀರಾ? ಆ ದಾಖಲೆ ಬೇಕಾ? ದಲಿತ ಸಿಎ ಸೈಟ್ ಮುಡಾದಲ್ಲಿ ಅಲಾಟ್ ಆಗಿದ್ದ ಸೈಟ್ ನಲ್ಲಿ ಅಕ್ರಮವಾಗಿ ಮನೆ ಕಟ್ಟಿದ್ದಾರೆ ಎಂದು ಹೇಳಿದ್ದಾರೆ.
ದಲಿತ ವಿಕಲಚೇತನ ವ್ಯಕ್ತಿ 24 ಸಾವಿರ ರೂಪಾಯಿ ನೀಡಿ ಸೈಟ್ ಪಡೆಯುತ್ತಾನೆ. ಸಾಕಮ್ಮ ಎಂಬುವವರ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ 10 ಸಾವಿರ ರೂ.ಸ್ಕೈಯರ್ ಫೀಟ್ ಜಾಗ ಅಕ್ರಮವಾಗಿ ಪಡೆಯುತ್ತಾರೆ. ಆಮೇಲೆ ಸೈಟ್ ತಗೊಂಡವರು ಯಾರೋ ಮನೆ ಕಟ್ಟಿದ್ದಾರೆ ಎಂದು ನೋಡುವುದಕ್ಕೆ ಬರ್ತಾರೆ. ಈ ಬಗ್ಗೆ ನನ್ನ ಬಳಿ ಈಗಲೂ ದಾಖಲೆಗಳಿವೆ ಎಂದಿದ್ದಾರೆ.
ನನ್ನದು ತೆರೆದ ಪುಸ್ತಕ ಎಂದು ಸಿಎಂ ಸಿದ್ದರಾಮಯ್ಯ ಯಾವಾಗಲೂ ಹೇಳುತ್ತಿರುತ್ತಾರೆ. ಈ ದಾಖಲೆಗಳನ್ನು ತೆಗೆಯಿರಿ ಯಾರಿಗೆ ನೀವು ಸೇಲ್ ಮಾಡಿದ್ದೀರಿ? ಇನ್ನೂ ಯಾರ ಕೈಯಲ್ಲಿದೆ ಸೈಟ್ ಎಂಬುದು ಗೊತ್ತಾಗುತ್ತೆ. ಹೆಸರಿಗಷ್ಟೇ ಮಾರಾಟ ತೋರಿಸಿಕೊಂಡಿದ್ದಾರೆ. ಅದನ್ನು ತೆಗೆದರೆ ಮತ್ತೊಂದು ರಾಮಾಯಣ ಶುರುವಾಗುತ್ತೆ. ಸಿದ್ದರಾಮಯ್ಯ ವಿರುದ್ಧ ಬರಿ ಮುಡಾ ಹಗರಣವಷ್ಟೇ ಅಲ್ಲ, ಮೈಸೂರಿನಲ್ಲಿ ಸೀರಿಸ್ ಆಫ್ ಅಕ್ರಮ ಕೇಸ್ ಗಳು ಇವೆ ಎಂದು ತಿಳಿಸಿದ್ದಾರೆ.