ಹಾಸನ: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ಆದೇಶ ಹಿಂಪಡೆದ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಹಿಗ್ಗಾ ಮುಗ್ಗಾ ವಾಗ್ದಾಳಿ ಮುಂದುವರೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯನವರ ಕ್ಯಾಬಿನೆಟ್ ಡಿಕೆಶಿ ಪಾದದಡಿ ಇದೆ ಎಂದು ಕಿಡಿ ಕಾರಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಕಾನೂನು ಬಾಹಿರ ಚಟುವಟಿಕೆ ಮಾಡಿ ಅಕ್ರಮ ಆಸ್ತಿ ಮಾಡಿದ್ದಾರೆ. ಕನಕಪುರದ ಜನ ಒಂದುಕಾಲು ಲಕ್ಷದಲ್ಲಿ ಗೆಲ್ಲಿಸಿದ್ದಾರೆ ಅಂತಾರೆಲ್ಲ ಪಾಪ ಅವರೆಲ್ಲ ಇನ್ನೂ ಬಡದತನದಲ್ಲೇ ಇದ್ದಾರೆ. ಎರಡು ಹೊತ್ತಿನ ಊಟಕ್ಕೂ ಗತಿ ಇಲ್ಲದ ಸ್ಥಿತಿ ಇದೆ. 1400 ಕೋಟಿ 2-3 ವರ್ಷದಲ್ಲಿ ಹೇಗೆ ಮಾಡುವುದು? ಎರಡೇ ವರ್ಷದಲ್ಲಿ ಆದಾಯ 30%, 40%, 200%, 300% ಏರಿಕೆ ಮಾಡುವುದು ಹೇಗೆ? ಎಂದು ಬಡವರಿಗೂ ಹೇಳಿಕೊಡಲಿ ಎಂದು ಟಾಂಗ್ ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ ವಿರುದ್ಧದ ಕೇಸ್ ಹೈಕೋರ್ಟ್ ನಲ್ಲಿ ಇರುವಾಗ ರಾಜ್ಯ ಸರ್ಕಾರ ನಿರ್ಧಾರ ಮಡುವುದು ತಪ್ಪು. ಕಾನೂನಿಗಿಂತ ದೊಡ್ಡವರು ಎಂಬುದನ್ನು ಪ್ರದರ್ಶನ ಮಾಡಿಕೊಂಡಿದ್ದಾರೆ. ಲೂಟಿ ಮಾಡುವವರಿಗೆ ನಮ್ಮ ಸರ್ಕಾರ ಎಂಬುದನ್ನು ನಿರೂಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.