ಬೆಂಗಳೂರು: ಲಿಸ್ಟ್ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಮಾತನಾಡಿರುವ ವಿಡಿಯೋ ವೈರಲ್ ವಿಚಾರವಾಗಿ ಮತ್ತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಮಾಜಿ ಶಾಸಕ ಯತೀಂದ್ರಗೆ ಕರೆ ಮಾಡಿದ್ದು ಯಾರು? ಹಲೋ ಅಪ್ಪ ಅಂತಾ ಯತೀಂದ್ರ ಹೇಳಿದ್ದು ಯಾರಿಗೆ? ವಿವೇಕಾನಂದ ಯಾರು? ನಾಲ್ಕೈದು ಲಿಸ್ಟ್ ಕೊಟ್ಟಿದ್ದು ಏನು? ಅದು ಸಿಎಂ ಪರಿಹಾರ ನಿಧಿಯ ಹೆಸರುಗಳು. ಓರ್ವ ಮುಖ್ಯಮಂತ್ರಿ ಫೋನ್ ಮಾಡಿ ಲಿಸ್ಟ್ ಬಗ್ಗೆ ಮಾತನಾಡುತ್ತಾರೆ. ಯಾರು ಮಹದೇವ? ಲೇಬರ್ ಇನ್ಸ್ ಪೆಕ್ಟರ್ ಅವನು. ಆರ್.ಮಹದೇವ ಅವರ ವಿಶೇಷ ಕರ್ತವ್ಯವೇನು? ಎಂದು ಪ್ರಶ್ನಿಸಿದ್ದಾರೆ.
ಯತೀಂದ್ರ ಅವರು ಮಾತನಾಡಿದ್ದು ಸಿಎಸ್ ಆರ್ ಫಂಡ್ ಬಗ್ಗೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಹೇಳುತ್ತಿದ್ದಾರೆ. ಸಿಎಸ್ ಆರ್ ರಾಜ್ಯದ್ದೋ? ವರುಣಾ ಕ್ಷೇತ್ರದ್ದೋ? ಸಿಎಸ್ ಆರ್ ಫಂಡ್ ಆಗಿದ್ದರೆ ವರುಣ ಕ್ಷೇತ್ರದ ಬಿಇಓ ಕಳಿಸಿರಬೇಕಲ್ಲ. ಮೈಸೂರು ಡಿಡಿಪಿಐ ಲಿಸ್ಟ್ ಇರಬೇಕಲ್ಲ ಹೊರಗೆ ಇಡಿ ಅದನ್ನ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಾಪ ಸಿಎಂ ಕಚೇರಿಗೆ ಬಂದು ಅದನ್ನು ಮಗನಿಗೆ ಕೇಳಿಕೊಂಡು ಮಾಡಬೇಕಾ? ಇಷ್ಟು ಭಂಡತನ ಬೇಡ. ಈ ಹಿಂದೆ ನಿಮ್ಮ ಪ್ರಾಮಾಣಿಕತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ ನಿಮ್ಮ ಪಕ್ಷದವರೇ ಈಗ ಹಳೆಯ ಸಿದ್ದರಾಮಯ್ಯ ಅಲ್ಲ ಅಂತ ಹೇಳುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.