ಹಾಸನ: ಒಂದು ವಾರ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ತಿಳಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮರಸ್ವಾಮಿ, ಇನ್ನೊಂದುವಾರ ರಾಜಕಾರಣದ ಬಗ್ಗೆ ಮಾತನಾಡಲ್ಲ, ಕರಣ ನಾವೆಲ್ಲರೂ ಈಗ ಚಂದ್ರಯಾನ ಯಶಸ್ಸಿನ ಗುಂಗಿನಲ್ಲೇ ಇದ್ದೇವೆ. ಇವತ್ತು ದೇಶ-ವಿದೇಶಗಳಲ್ಲಿ ಚಂದ್ರಯಾನದ ಬಗ್ಗೆಯೇ ದೊಡ್ಡಮಟ್ಟದ ಚರ್ಚೆಗಳು ನಡೆಯುತ್ತಿವೆ, ಪ್ರಶಂಸೆಗಳು ಬರುತ್ತಿವೆ. ಎಲ್ಲರ ಗಮನ ಆ ಕಡೆಯೇ ಇದೆ. ಹೀಗಾಗಿ ನಾನು ಒಂದು ವಾರ ರಾಜಕಾರಣದ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.
ಇಸ್ರೋ ವಿಜ್ಞಾನಿಗಳ ನಿರಂತರ ಶ್ರಮದಿಂದ ದೇಶದ ಪ್ರತಿಷ್ಠೆ ವಿಶ್ವಮಟ್ಟದಲ್ಲಿ ಹೆಚ್ಚಿದೆ. ಇಂದು ಪ್ರಧಾನಮಂತ್ರಿಗಳು ಬೆಂಗಳೂರಿಗೆ ಆಗಮಿಸಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ ಹೋಗಿದ್ದಾರೆ. ಹೀಗಾಗಿ ರಾಜಕಾರಣ ಬಗ್ಗೆ ಹೆಚ್ಚು ಚರ್ಚೆ ಮಾಡಲ್ಲ ಎಂದರು.
ಇದೇ ವೇಳೆ ಲೋಡ್ ಶೆಡ್ಡಿಂಗ್ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ಈಗಾಗಲೇ ಅನಧಿಕೃತ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಆದರೆ ಸಚಿವರು ಲೋಡ್ ಶೆಡ್ಡಿಂಗ್ ಅವಶ್ಯಕತೆ ಇಲ್ಲ ಎನ್ನುತ್ತಿದ್ದಾರೆ. ಕರೆಂಟ್ ಗಾಗಿ ಹಳ್ಳಿ ಜನರು ಕಾಯುವ ಸ್ಥಿತಿ ಬಂದಿದೆ. ಅನಧಿಕೃತ ಲೋಡ್ ಶೆಡ್ಡಿಂಗ್ ಗೆ ಯಾವುದೇ ಸಿದ್ದತೆ ಮಾಡಿಕೊಂಡಿಲ್ಲ, ಮುಂದೆ ಆಗುವ ಸಮಸ್ಯೆಗಳ ಬಗ್ಗೆ ಇವರಿಗೆ ಚಿಂತನೆಯೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.