ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿದೇಶ ಪ್ರವಾಸಕ್ಕೆ ಟಾಂಗ್ ನೀಡಿದ್ದ ಕೃಷಿ ಸಚಿವ ಚಲುವರಾಯಸ್ವಾಮಿ, ಕುಮಾರಸ್ವಾಮಿ ವಿದೇಶದಲ್ಲಿಯೇ ಇರಲಿ, ಅದಕ್ಕೆ ಬೇಕಾದ ವ್ಯವಸ್ಥೆ ನಾವು ಮಾಡುತ್ತೇವೆ ಎಂದಿದ್ದರು. ಇದೀಗ ಕೃಷಿ ಸಚಿವರ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸಚಿವರ ಹೇಳಿಕೆ ಬಗ್ಗೆ ಕಿಡಿಕಾರಿದ್ದಾರೆ. ಇಲ್ಲಿ ಲೂಟಿ ಹೊಡೆಯೋಕೆ ನಮ್ಮನ್ನ ಬಿಟ್ಬಿಡಿ, ನೀವು ವಿದೇಶದಲ್ಲಿ ಇರಿ ಅಂತ ಸಲಹೆ ಕೊಟ್ಟ ಹಾಗಿದೆ. ಏಕೆಂದರೆ, ಮಾನ ಮಾರ್ಯಾದೆ ಇಲ್ಲದೆ ಇಲ್ಲಿ ದರೋಡೆ ಮಾಡಿಕೊಂಡು ಕೂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದೇಶಿ ಪ್ರವಾಸಕ್ಕೆ ನಾನು ಅವರಿಂದ ವ್ಯವಸ್ಥೆ ಮಾಡಿಸಿಕೊಂಡು ಹೋಗಬೇಕಾ? ಆ ಪಾಪದ ಹಣ ತಗೊಂಡು ಹೋಗಬೇಕಾ? ನನಗೆ ವಿದೇಶಕ್ಕೆ ಹೋಗುವ ಯೋಗ್ಯತೆ ಇಲ್ಲವೇ? ಕಳೆದ 12 ವರ್ಷದಿಂದ ಪಕ್ಷದ ಸಂಘಟನೆಗೆ ಸಮಯ ಮೀಸಲಿಟ್ಟಿದ್ದೆ. ಎಲ್ಲೂ ಹೊರಗೆ ಹೋಗಿ ಬರುವ ಅವಕಾಶ ಸಿಕ್ಕಿರಲಿಲ್ಲ. ದೇಶ ಸುತ್ತು, ಕೋಶ ಓದು ಅಂತಾ ಹಿರಿಯರ ಮಾತಿದೆ. ಯಾವ ದೇಶದಲ್ಲಿ ಏನೇನಿದೆ ಅಂತಾ ತಿಳ್ಕೊಬೇಕಲ್ಲಾ. ಅಲ್ಲಿ ಯಾವ ರೀತಿ ಇದೆ, ನಮ್ಮಲ್ಲಿ ಯಾವ ರೀತಿ ಇದೆ ನೋಡಬೇಕಲ್ಲಾ ಎಂದು ಹೇಳಿದ್ದಾರೆ.