ಬೆಂಗಳೂರು: ಬೆಸ್ಕಾಂ ಇಲಾಖೆ ಅಧಿಕಾರಿಗಳು 71 ಯೂನಿಟ್ ಗೆ ಮೂರು ಪಟ್ಟು ಅಧಿಕ ದಂಡ ವಿಧಿಸಿದ್ದಾರೆ. ದಂಡದ ಬಿಲ್ ಮರುಪರಿಶೀಲನೆ ಮಾಡುವಂತೆ ಹೇಳಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ದೀಪಾವಳಿಯಲ್ಲಿ ಮನೆಗೆ ದೀಪಾಲಂಕಾರ ಮಾಡಲು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ವಿಧಿಸಿದ 68,526 ರೂಪಾಯಿ ದಂಡದ ಮೊತ್ತ ಪಾವತಿಸಿದ್ದೇನೆ. ಆದರೆ ಬೆಸ್ಕಾಂ ವಿಧಿಸಿರುವ ದಂಡದ ಮೊತ್ತ ಸಮರ್ಪಕವಾಗಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಸ್ಕಾಂ ಲೆಕ್ಕಾಚಾರದ ಪ್ರಕಾರ 2.5 ಕಿ.ವ್ಯಾ ವಿದ್ಯುತ್ ಬಳಕೆಯಾಗಿದೆ ಅಂತ ಇದೆ. ಬೆಸ್ಕಾಂ ಇಲಾಖೆ 2,526 ರೂಪಾಯಿ ಫೈನ್ ಹಾಕಬೇಕಿತ್ತು. ಆದರೆ 68,526 ರೂಪಾಯಿ ದಂಡ ವಿಧಿಸಿದ್ದಾರೆ. ನಮ್ಮ ಮನೆಗೆ 35 ಕಿಲೋವ್ಯಾಟ್ ವಿದ್ಯುತ್ ಬಳಕೆಗೆ ಅನುಮತಿ ಇದೆ. ನಾನು ನಿತ್ಯ ಉಪಯೋಗ ಮಾಡುವ ಕರೆಂಟ್ ಇದು. ಮನೆಗೆ ತೆಗೆದುಕೊಂಡಿರುವ 33 ಕೆವಿ ಸೇರಿ 68 ಸಾವಿರ ರೂಪಾಯಿ ಹಾಕಿದ್ದಾರೆ. ಒಬ್ಬ ಮಾಜಿ ಸಿಎಂಗೆ ಹೀಗಾದರೆ ಸಾಮಾನ್ಯ ಜನರ ಸ್ಥಿತಿ ಏನು? ಎಂದು ಪ್ರಶ್ನಿಸಿದ್ದಾರೆ.
ನಾನು ವಿದ್ಯುತ್ ಮಹಜರು ಕಾಪಿ ನೀಡುವಂತೆ ಕೇಳಿದ್ದೇನೆ. ನನಗೆ ಕರೆಂಟ್ ಕಳ್ಳ ಅಂತ ಲೇಬಲ್ ಬೇರೆ ಕೊಟ್ಟಿದ್ದಾರೆ. ದಂಡ ಪಾವತಿ ಮಾಡಿಯಾಗಿದೆ ಕರೆಂಟ್ ಕಳ್ಳ ಎಂದು ಕರೆಯುವಂತಿಲ್ಲ ಎಂದು ಗುಡುಗಿದರು.