ಬೆಂಗಳೂರು: ಇಡೀ ರಾಮನಗರ ಜಿಲ್ಲೆ ಬೆಂಗಳೂರು ಸೇರಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ರಾಮನಗರ ಹೆಸರು ಬದಲಿಸಿದರೆ ಆಮರಣಾಂತ ಉಪವಾಸ ಕೂರುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಮನಗರದ ಜೊತೆ ವ್ಯಾವಹಾರಿಕ ಸಂಬಂಧವಿಲ್ಲ, ಭಾವನಾತ್ಮಕ ಸಂಬಂಧವಿದೆ. ನನ್ನ ಕೊನೆಯ ಉಸಿರು ಇರುವ ತನಕ ರಾಮನಗರಕ್ಕಾಗಿ ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ನಾನು ಹಾಸನದಲ್ಲಿ ಹುಟ್ಟಿದ್ದು, ನನ್ನ ಅಂತ್ಯ ರಾಮನಗರದಲ್ಲಿ. ರಾಮನಗರದ ಹೆಸರು ಬದಲಿಸಲು ಹೊರಟರೆ ಉಪವಾಸ ಮಾಡುತೇನೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ನನ್ನ ತಂದೆಯ ಹತ್ತಿರ ಪಂಚೆ, ಜುಬ್ಬಾ ಬಿಟ್ಟರೆ ಬೇರೆ ಏನೂ ಇಲ್ಲ. ನಾವು ಹಣ ಮಾಡಿದ್ದೇವೆ ಆದರೆ ಲೂಟಿ ಹೊಡೆದು ಹಣ ಮಾಡಿಲ್ಲ. ಕನಕಪುರವನ್ನು ಬೆಂಗಳೂರು ದಕ್ಷಿಣ ಮಾಡಿ ಯಾರಿಗೆ ದಕ್ಷಿಣೆ ಕೊಡುತ್ತೀರಿ? ಕನಕಪುರದವರಿಗೆ ಬೆಂಗಳೂರು ಬ್ರ್ಯಾಂಡ್ ಬೇಕಿದೆ. ಇನ್ನಿತರ ಜಮೀನು ಡಿ.ಕೆ.ಸುರೇಶ್ ಹೆಸರಿಗೆ ನೋಂದಣಿಯಾಗುತ್ತದೆ. ಕೆಐಎಡಿಬಿ ಸ್ವಾದೀನ ಆಗಿದ್ದ ಜಮೀನನ್ನೂ ನೋಂದಣಿ ಮಾಡಿಕೊಂಡಿದ್ದರು ಎಂದು ಕಿಡಿಕಾರಿದ್ದಾರೆ.