ಬೆಂಗಳೂರು: ದೀಪಾವಳಿ ಹಬ್ಬದ ವೇಳೆ ಜೆ.ಪಿ.ನಗರದ ತಮ್ಮ ನಿವಾಸಕ್ಕೆ ದೀಪಾಲಂಕಾರ ಮಾಡಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ವಿದ್ಯುತ್ ಕಳ್ಳತನ ಎಂದು ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿತ್ತು. ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಕುಮಾರಸ್ವಾಮಿಯವರ ಜೆ.ಪಿ.ನಗರದ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ದಂಡ ವಿಧಿಸುವುದಾಗಿ ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದರು.
ಅದರಂತೆ ಇದೀಗ ಬೆಸ್ಕಾಂ ಜಾಗೃತ ದಳದ ಡಿವೈಎಸ್ ಪಿ ಅನುಷ ನೇತೃತ್ವದಲ್ಲಿ ವಿದ್ಯುತ್ ಬಳಕೆಯ ಕೌಂಟಿಂಗ್ ಮಾಡಿ, 10 ನಿಮಿಷಕ್ಕೆ ಎಷ್ಟು ವಿದ್ಯುತ್ ಬಳಕೆ ಮಾಡಲಾಗಿದೆ ಎಂಬುದರ ಆಧಾರದ ಮೇಲೆ ಲೆಕ್ಕ ಮಾಡಲಾಗಿದ್ದು, ಎರಡು ದಿನ ಅಕ್ರಮವಾಗಿ ಬಳಕೆಯಾದ ವಿದ್ಯುತ್ ಗೆ ದಂಡ ವಿಧಿಸಲಾಗಿದೆ.
ಬೆಸ್ಕಾಂ ಇಲಾಖೆ ಮಾಜಿ ಸಿಎಂ ಕುಮರಸ್ವಾಮಿಯವರಿಗೆ 68 ಸಾವಿರ ರೂಪಾಯಿ ದಂಡ ವಿಧಿಸಿದೆ. ದಂಡದ ಮೊತ್ತವನ್ನು 7 ದಿನಗಳ ಒಳಗಾಗಿ ಪಾವತಿ ಮಾಡುವಂತೆ ಸೂಚಿಸಿದೆ.