ರಾಮನಗರ: ಕುಮಾರಸ್ವಾಮಿ ನೈಸ್ ವ್ಯವಹಾರ ಮಾಡಿದ್ದಾರೆ ಎಂಬ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿರುವ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಡಿ.ಕೆ ಸಹೋದರು ಕೊಳ್ಳೆ ಹೊಡೆದಿರುವ ನೈಸ್ ಭೂಮಿಯ ದಾಖಲೆಗಳನ್ನು ಬಹಿರಂಗ ಮಾಡುತ್ತೇನೆ ಎಂದು ಹೇಳಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾಳೆ ಅಥವಾ ನಾಡಿದ್ದು ನೈಸ್ ಅಕ್ರಮಗಳ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ. ಆಗ ಲೂಟಿ ಮಾಡಿದ್ದು, ಅಕ್ರಮ ನಡೆಸಿರುವುದು ಯಾರು? ರೈತರಿಗಾದ ಅನ್ಯಾಯವೇನು ಎಂಬುದು ಗೊತ್ತಾಗುತ್ತದೆ ಎಂದಿದ್ದಾರೆ.
ನೈಸ್ ಭೂಮಿ ಸೇರಿ ಬೆಂಗಳೂರಿನ ಸುತ್ತಾ ರೈತರ ಭೂಮಿ ಲೂಟಿ ಮಾಡಿಕೊಂಡು ಕೆಲವರು ಬದುಕುತ್ತಿದ್ದಾರೆ. 2013 ರಲ್ಲಿ ಎಂಪಿ ಆಗುವುದಕ್ಕೆ ಮುಂಚೆ ಡಿ.ಕೆ.ಸುರೇಶ್ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ? ಎಲ್ಲವೂ ಗೊತ್ತಿದೆ ಎಂದು ಗುಡುಗಿದರು.
ನೈಸ್ ಯೋಜನೆಗೆ ದೇವೇಗೌಡರೇ ಒಪ್ಪಂದ ಮಾಡಿಕೊಂಡಿದ್ದು. ಆದರೆ ಅವರು ರಸ್ತೆ ಆಗಲಿ ಎಂದು ಒಪ್ಪಂಡ ಮಾಡಿಕೊಂಡರು. ಬೆಂಗಳೂರು-ಮೈಸೂರು ಜನಕ್ಕೆ ಅನುಕೂಲವಾಗಲಿ ಎಂದು ಅವರು ಈ ಯೋಜನೆಗೆ ಒಪ್ಪಿಗೆ ನೀಡಿದರು. 1995 ಅಥವಾ 1986ನೇ ಇಸವಿ ಇರಬೇಕು, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದರು. ಈ ಜಿಲ್ಲೆಯ ಮಾಯಗಾನಹಳ್ಳಿ ಬಳಿ ಭೀಕರ ಅಪಘಾತ ಸಂಭವಿಸಿ 15-20 ಶಾಲಾ ಮಕ್ಕಳು ತೀರಿಕೊಂಡರು. ಆವತ್ತೇ ಬೆಂಗಳೂರು-ಮೈಸೂರು ನಡುವೆ ನಾಲ್ಕುಪಥದ ಹೆದ್ದಾರಿ ಮಾಡಬೇಕು ಎಂದು ದೇವಗೌಡರು ತೀರ್ಮಾನ ಮಾಡಿದರು. ಹಣ ಇಲ್ಲ ಎನ್ನುವ ಕಾರಣಕ್ಕೆ ಹೆಗಡೆ ಅವರ ಕಾಲದಲ್ಲಿ ಆ ಯೋಜನೆ ಆಗಲಿಲ್ಲ. ಕೊನೆಗೆ ದೇವೇಗೌಡರು ಮುಖ್ಯಮಂತ್ರಿ ಆದ ಮೇಲೆ ಈ ಯೋಜನೆಗೆ ಚಾಲನೆ ನೀಡಿದರು ಎಂದರು .
ದೇವೇಗೌಡರು ಮಾಡಿಕೊಂಡ ಒಪ್ಪಂದದಂತೆ ರಸ್ತೆ ಆಗಿದ್ದಿದ್ದರೆ ಏಷ್ಯಾಖಂಡದಲ್ಲಿಯೇ ಬೆಂಗಳೂರು ಮೈಸೂರು ನಗರಗಳು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗುತ್ತಿದ್ದವು. ವಾಣಿಜ್ಯ ಚಟುವಟಿಕೆಗಳು ಹೆಚ್ಚಿ ಜನರಿಗೆ ಜೀವನೋಪಾಯ ಸಿಗುತ್ತಿತ್ತು. ಆದರೆ, ಈ ಲೂಟಿಕೋರರು ಮಾಡಿದ್ದೇನು? ಬೆಂಗಳೂರು ಸುತ್ತಾಮುತ್ತ ರೈತರ ಭೂಮಿಯನ್ನು ಕೊಳ್ಳೆ ಹೊಡೆದರು. ನೈಸ್ ಕಂಪನಿ ಮಾಡಿರುವ ಲೂಟಿಯಲ್ಲಿ ಡಿಕೆ ಸಹೋದರರ ಪಾಲು ಎಷ್ಟಿದೆ? ಈ ಬಗ್ಗೆ ದಾಖಲೆಗಳನ್ನೇ ಹೊರಗಿಡುತ್ತೇನೆ. 2004ರಲ್ಲಿ ಇವರ ಅಣ್ಣ ಅಂದರೆ ಡಿ.ಕೆ ಸುರೇಶ್ ಅಣ್ಣ ಡಿ.ಕೆ.ಶಿವಕುಮಾರ್ ರಾಮನಗರ ಜಿಲ್ಲೆ ಉದ್ಧಾರ ಮಾಡುವುದಕ್ಕೆ ಮಂತ್ರಿ ಆಗಿದ್ದರೋ ಅಥವಾ ನೈಸ್ ಕಂಪನಿಯನ್ನು ಉದ್ಧಾರ ಮಾಡಿ ದುಡ್ಡು ಹೊಡೆಯೋದಕ್ಕೆ ಮಂತ್ರಿ ಆಗಿದ್ದರೋ? ಎಲ್ಲ ದಾಖಲೆಗಳನ್ನು ನಾಳೆ ನಾಡಿದ್ದರಲ್ಲಿಯೇ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.