ಬೆಂಗಳೂರು: ಹಿಂದೆ ಲುಲು ಮಾಲ್ ಕಾಮಗಾರಿ ವೇಳೆ 6 ತಿಂಗಳು ಕರೆಂಟ್ ಬಿಲ್ ಕಟ್ಟಿಲ್ಲ. ಲುಲು ಮಾಲ್ ಬಳಕೆ ಮಾಡಿದ ವಿದ್ಯುತ್ ಬಿಲ್ ಗೆ ದಂಡ ಹಾಕ್ತೀರಾ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೆಸ್ಕಾಂ ಅಧಿಕಾರಿಗಳನ್ನು ಪ್ರಶಿಸಿದ್ದಾರೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಕ್ರಮ ವಿದ್ಯುತ್ ಸಂಪರ್ಕ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ಕರೆಂಟ್ ಕಳ್ಳ ಎಂದು ಪೋಸ್ಟರ್ ಅಂಟಿಸಿದ್ದ ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಪಾಲುದಾರಿಕೆಯ ಲುಲು ಮಾಲ್ ನ ಆಸ್ತಿ ಮತ್ತು ಬಳಕೆ ಮಾಡಿದ ವಿದ್ಯುತ್ ಬಗ್ಗೆ ಪ್ರಸ್ತಾಪಿಸಿದ ಕುಮಾರಸ್ವಾಮಿ, ಲುಲು ಮಾಲ್ ಗಾಗಿ 24 ಎಕರೆ ಖರಾಬು ಭೂಮಿಯನ್ನು ಕಬಳಿಸಲಾಗಿದೆ. 1934ರ ಭೂಮಿ ದಾಖಲೆಗಳನ್ನು ಸುಟ್ಟು ಹಾಕಿ ನಾಶ ಮಾಡಿದ್ದಾರೆ. ಹೇಗೆಲ್ಲ ದಾಖಲೆ ಬದಲಿಸಿದ್ದಾರೆ ಎಂಬುದು ಗೊತ್ತು. ದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿ ಭೂಮಿ ಕಬಳಿಸಿದ್ದಾರೆ ಎಲ್ಲವನ್ನೂ ಶೀಘ್ರವೇ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.
ಲುಲು ಮಾಲ್ ಕಾಮಗಾರಿ ವೇಳೆ, ಆರಂಭದ 6 ತಿಂಗಳು ಕರೆಂಟ್ ಬಿಲ್ ಕಟ್ಟಿಲ್ಲ. ಆಗ ಲುಲು ಮಾಲ್ ಬಳಕೆ ಮಾಡಿದ್ದ ವಿದ್ಯುತ್ ಗೆ ದಂಡ ಹಾಕ್ತೀರಾ? ಹೈಟೆನ್ಶನ್ ವೈರ್ ಅಂಡರ್ ಗ್ರೌಂಡ್ ನಲ್ಲಿ ತೆಗೆದುಕೊಂಡು ಮಾಲ್ ಗೆ ಹೋಗಿದ್ದಾರೆ. ಅದಕ್ಕೆ ಎಷ್ಟು ದಂಡ ಹಾಕ್ತೀರಾ? ಸುಜಾತಾ ಟಾಕೀಸ್ ಮುಂದೆ ಇದ್ದ ಹೈ ಟೆನ್ಶನ್ ವೈರ್ ಹೇಗೆ ಅಂಡರ್ ಗ್ರೌಂಡ್ ಗೆ ತೆಗೆದುಕೊಂಡು ಹೋದಿರಿ? ಜನರಿಗಾಗಿ ಮಾಡಿದ್ರಾ? ನಕಲಿ ಸೊಸೈಟಿಯನ್ನು ಅಸಲಿ ಮಾಡಿಕೊಳ್ಳುವವರು ಇವರು ಎಂದು ವಾಗ್ದಾಳಿ ನಡೆಸಿದ್ದಾರೆ.