ಬೆಂಗಳೂರು: ಮಾಜಿ ಕಾರ್ಪೊರೇಟರ್ ಹಾಗೂ ಬಿಲ್ಡರ್ ಮನೆಯಲ್ಲಿ ನಡೆದ ಐಟಿ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿದ್ದು, ಇದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಈ ನಡುವೆ ಮಾಜಿ ಸಿಎಂ ಹೆಚ್. ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಸಿಕ್ಕ ಸಿಕ್ಕ ಕಡೆ ಬಾಯಿ ಹಾಕುತ್ತಿರುವ ಪರ್ಸಂಟೇಜ್ ಪಟಾಲಂ ಈಗ ಕಸಕ್ಕೂ ಬಾಯಿ ಹಾಕಿದೆ ಎಂದು ಕಿಡಿ ಕಾರಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಅನ್ನುವುದು ಕೆಲವರಿಗೆ ಬಿರಿಯಾನಿ. ಅದರ ಒಳಗುಟ್ಟು ರಟ್ಟಾಗಿದೆ. ಬ್ರ್ಯಾಂಡ್ ಹೆಸರಿನಲ್ಲಿ ಕೊಳ್ಳೆ ಹೊಡೆಯಲು ಕಂಡ ಕಂಡ ಕಡೆ ಬೇಲಿ ಹಾಕಲು ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿಯೂ ಕಸದ ಡಂಪಿಂಗ್ ಯಾರ್ಡ್ ಗಳನ್ನು ಸೃಷ್ಟಿ ಮಾಡುತ್ತಿರುವುದು ದಿಟ. ದಿನವೊಂದಕ್ಕೆ 1,630 ಟನ್ ಕಸ ಸುರಿದರೆ ಅಲ್ಲಿನ ಜನರ ಪಾಡೇನು? ಎಂದು ಪ್ರಶ್ನಿಸಿದ್ದಾರೆ.
ಮಂಡೂರಿನ ಜನ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಯಶವಂತಪುರದ ಕ್ಷೇತ್ರದ ಈ ನರಕದಲ್ಲೇ ಜನ ಬೇಯುತ್ತಿದ್ದಾರೆ. ದೊಡ್ಡಬಳ್ಳಾಪುರ ಜನರೂ ಕಶದ ಕಷ್ಟಕ್ಕೆ ಸಿಲುಕಿದ್ದಾರೆ. ಈಗ ರಾಮನಗರದ ಸರದಿ. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳನ್ನು ಕಸದ ತೊಟ್ಟಿಗಳನ್ನಾಗಿ ಮಾಡಿ ಸಾವಿನ ದಿಬ್ಬಗಳನ್ನು ನಿರ್ಮಿಸಲು ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಹುನ್ನಾರ ಹೂಡಲಾಗಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.