ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮುಂದುವರೆಸಿದ್ದಾರೆ. ಮೊದಲು ರೈತರ ಬದುಕಿಗೆ ಗ್ಯಾರಂಟಿ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದ ಸಿಎಂ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವುದೆಂದರೆ ಯೋಜನೆಯ ಬಡ ಫಲಾನುಭವಿಗಳನ್ನು ವಿರೋಧಿಸುವುದು ಎಂದರ್ಥ ಎಂದು ಟಾಂಗ್ ನೀಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಗ್ಯಾರಂಟಿ ಯೋಜನೆ ವಿಚಾರವಾಗಿ ಕುಮಾರಸ್ವಾಮಿ ಮತ್ತೆ ಸರ್ಕಾರವನ್ನು ಛೇಡಿಸಿದ್ದಾರೆ.
ಐಶಾರಾಮಯ್ಯನವರೇ, ನನ್ನ ದನಿ ಬಡವರ ಪರ. ನಿಮ್ಮಂತೆ ಯಾರ ಮುಲಾಜಿಗೂ ಬಿದ್ದವನಲ್ಲ ನಾನು. ರಾಜ್ಯಕ್ಕೆ ರಾಜ್ಯವೇ ಬರದ ಬೆಂಕಿಯಲ್ಲಿ ಬೇಯುತ್ತಿದೆ. ರೈತ ಸಂಕುಲ ನರಕದಲ್ಲಿದೆ. ಮೊದಲು ಅವರ ಸಾಲ ಮನ್ನಾ ಮಾಡಿ ಎಂದು ಆಗ್ರಹಿಸಿದ್ದಾರೆ.
YST Tax, SST Tax ಕಲೆಕ್ಷನ್ ಬದಿಗಿಟ್ಟು ರೈತರ ಪರ ನಿಲ್ಲಿ. ಗ್ಯಾರಂಟಿ, ಗ್ಯಾರಂಟಿ ಎನ್ನುತ್ತಿದ್ದೀರಲ್ಲ ರೈತರ ಬದುಕಿಗೆ ಗ್ಯಾರಂಟಿ ಕೊಡಿ. ನಾನು ಸಾಲ ಮನ್ನಾ ಮಾಡಿ ತೋರಿಸಿದ್ದೇನೆ. ಈಗ ನೀವು ಮಾಡಿ. ಬರಿ ಬಾಯಿಮಾತೇಕೆ? ಇದೇ ನನ್ನ ಸವಾಲು ಎಂದು ಹೇಳಿದ್ದಾರೆ.