ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲದ ಸ್ಥಿತಿ ಇದೆ. ಜಲಕ್ಷಾಮ ಎದುರಾಗಿದೆ. ಜನ, ಜಾನುವಾರಗಳಿಗೆ ಹನಿ ನೀರಿಗೂ ತತ್ವಾರ ಶುರುವಾಗಿದೆ. ಪರುಸ್ಥಿತಿ ಹೀಗಿದ್ದರೂ ಕಾಂಗ್ರೆಸ್ ಸರ್ಕಾರ ಮಾತ್ರ ಜನರ ಕೋಟಿ ಕೋಟಿ ತೆರಿಗೆ ಹಣ ಸುರಿದು ಗ್ಯಾರಂಟಿ ಸಮಾವೇಶಗಳನ್ನು ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ರೋಮ್ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟಿಲು ಬಾರಿಸುತ್ತಿದ್ದ…! ಸಿದ್ದರಾಮಯ್ಯನವರೇ ನೀವೇ ನಮ್ಮ ನೀರೋ!! ರಾಜ್ಯದ ಪಾಲಿನ ಝೀರೋ!! ನಿಮಗೆ ಜನರ ಚಿಂತೆಯಿಲ್ಲ. ಚುನಾವಣೆಯ ಚಿಂತೆಯಷ್ಟೇ. ಆ ಚಿಂತೆಯೇ ನಿಮ್ಮ ಪಕ್ಷ, ಸರ್ಕಾರಕ್ಕೆ ಚಿತೆಯಾಗಲಿದೆ. ಇದು ಜನರೇ ನುಡಿಯುತ್ತಿರುವ ಭವಿಷ್ಯ. ಪ್ರಜೆಗಳ ಮಾತು ಆ ಪರಮೇಶ್ವರನ ಮಾತು ಒಂದೇ ಎಂದು ಗುಡುಗಿದ್ದಾರೆ.
ಬರಪೀಡಿತ ರೈತರಿಗೆ ನೀಡಲು ಸರ್ಕಾರದ ಬಳಿ 2000 ರೂಪಾಯಿ ಗತಿಯಿಲ್ಲ. ಆದರೆ ಗ್ಯಾರಂಟಿ ಸಮಾವೇಶಕ್ಕೆ ಬೇಕಾದಷ್ಟು ಹಣವಿದೆ. ತುರ್ತು ಉದ್ದೇಶಕ್ಕೆ ಇರಿಸಿರುವ ಜಿಲ್ಲಾಧಿಕಾರಿ, ತಹಶೀಲ್ದಾರ್ ಗಳ ಪಿಡಿ ಖಾತೆಗೆ ಸರ್ಕಾರ ಕನ್ನ ಹಾಕಿದೆ ಎಂದು ಆರೋಪಿಸಿದ್ದಾರೆ.
ಒಂದು ವರ್ಷದ ಸರ್ಕಾರದ ಬದುಕು ಜಾಹೀರಾತು ಮೇಳದಲ್ಲೇ ಮುಗಿದು ಹೋಗಿದೆ. ಗ್ಯಾರಂಟಿ ಪ್ರಚಾರ, ಸಮಾವೇಶ ಖರ್ಚುಗಳ ಶ್ವೇತಪತ್ರ ಹೊರಡಿಸಲಿ ಸರ್ಕಾರದ ಅಸಲಿ ಬಣ್ಣ ಬಯಲಾಗಲಿದೆ ಎಂದು ಆಗ್ರಹಿಸಿದ್ದಾರೆ.